ಗಂಗಾವತಿ (ಕೊಪ್ಪಳ): ಇಲ್ಲಿನ ಆನೆಗೊಂದಿ ರಸ್ತೆಯಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ವಿದ್ಯಾರ್ಥಿ ಚಿಕಿತ್ಸೆ ಪಡೆಯುತ್ತಿದ್ದು, ಇಂದಿನಿಂದ ಆರಂಭವಾಗಲಿರುವ ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆ ಮಾಡಿದೆ.
ಕಳೆದ ಒಂದು ವಾರದಿಂದ ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಂಗಾವತಿ ಮೂಲದ ವಿದ್ಯಾರ್ಥಿ, ಸಿಇಟಿ ಪರೀಕ್ಷೆ ಬರೆಯಲು ಕೊಪ್ಪಳದ ಬಾಲಕಿಯರ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಅವರಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಆರೋಗ್ಯ ಇಲಾಖೆ ಪ್ರತ್ಯೇಕ ವ್ಯವಸ್ಥೆ ಮಾಡಿದೆ.
ಗಂಗಾವತಿಯಿಂದ ಕೊಪ್ಪಳಕ್ಕೆ ನಿತ್ಯ ಎರಡು ದಿನಗಳ ಕಾಲ ಪ್ರತ್ಯೇಕ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಕಳುಹಿಸಲಾಗುತ್ತಿದೆ. ತಳಕಲ್ನಲ್ಲಿರುವ ವಿಶೇಷ ಕೋವಿಡ್ ಆಸ್ಪತ್ರೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗುತ್ತಿದೆ. ಪರೀಕ್ಷೆ ಮುಗಿದ ಬಳಿಕ ಪುನಃ ವಾಪಸ್ ಕರೆ ತರಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.