ಕುಷ್ಟಗಿ (ಕೊಪ್ಪಳ): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಕ್ಕೆ ನಮ್ಮ ರಾಜ್ಯದಲ್ಲಿರುವ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸುವುದು ದೊಡ್ಡ ವಿಚಾರವೇನೂ ಆಗಿರಲಿಲ್ಲ ಎಂದು ಮಾಜಿ ಸಚಿವ, ಯಮಕನಮರಡಿ ಕ್ಷೇತ್ರದ ಶಾಸಕ ಸತೀಶ ಜಾರಕಿಹೊಳಿ ಹೇಳಿದರು.
ಸೋಮವಾರ ಸುರಪುರಕ್ಕೆ ಹೋಗುವ ಮಾರ್ಗದಲ್ಲಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ನಿಂದ ನಮ್ಮ ಬಸ್ಗಳು ಖಾಲಿ ಇವೆ, ಚಾಲಕರು ಖಾಲಿಯೇ ಇದ್ದಾರೆ. ಡೀಸಲ್ ಖರ್ಚು ಮಾತ್ರ ಬರುತ್ತಿತ್ತು ಎಂದರು.
ಇಡೀ ದೇಶ ಮಹಾಮಾರಿ ಕೊರೊನಾ ಸಂಕಷ್ಟದಲ್ಲಿರುವಾಗ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವ ಸರ್ಕಾರದ ನಡೆ ಖಂಡನೀಯ ಎಂದರು. ಕೊರೊನಾ ವೈರಸ್ ಲಾಕ್ ಡೌನ್ ಜಾರಿಯಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಪಾತಾಳ ಕಂಡಿದೆ. ಆರ್ಥಿಕ ಚೇತರಿಕೆಗಾಗಿ ಮದ್ಯ ಮಾರಾಟಕ್ಕೆ ಅನುಮತಿ ನೀಡಿದೆ. ಸರ್ಕಾರಕ್ಕೆ ಮದ್ಯ ಮಾರಾಟದಿಂದ ಮೂಲ ಆದಾಯ ಬಂದರೂ, ಲಾಕ್ ಡೌನ್ ಸಂಧರ್ಭದಲ್ಲಿ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕಿತ್ತು ಎಂದರು.
ಪ್ರತಿಯೊಂದು ರೋಗಕ್ಕೂ ಅಂತ್ಯ ಇದ್ದೇ ಇರುತ್ತದೆ. ಸಾರ್ವಜನಿಕರು ಕಟ್ಟು ನಿಟ್ಟಾಗಿ ಸಾಮಾಜಿಕ ಅಂತರ ಪಾಲಿಸಬೇಕು ಎಂದರು. ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಶೇಖರಗೌಡ ಮಾಲಿಪಾಟೀಲ ಮತ್ತಿತರರು ಉಪಸ್ಥಿತರಿದ್ದರು.