ಗಂಗಾವತಿ: ಆನೆಗೊಂದಿ ಪರಿಸರ ಪ್ರಾಂತ್ಯ ಎಂದರೆ ಹೇಳಿ ಕೇಳಿ ಪ್ರವಾಸಿ, ಐತಿಹಾಸಿಕ, ಸುಂದರ ಪರಿಸರ ಹಾಗೂ ಧಾರ್ಮಿಕ ತಾಣದ ತವರು. ಹೀಗಾಗಿ ಇಲ್ಲಿಗೆ ಚಾರಣಿಗರು ಮಾತ್ರವಲ್ಲ, ಪ್ರವಾಸಿಗರ ಸಂಖ್ಯೆ ಸಹಜವಾಗಿ ಹೆಚ್ಚು. ಇದೀಗ ಅಂತಹ ಧಾರ್ಮಿಕ ತಾಣಗಳಲ್ಲಿ ಒಂದಾದ ಅಶೇಷ ಭಕ್ತ ವೃಂದವನ್ನು ಹೊಂದಿರುವ ನವ ವೃಂದಾವನದ ಗಡ್ಡೆಯಲ್ಲಿನ ಒಂಬತ್ತು ಯತಿಗಳ ಸಮಾಧಿಗಳ (ವೃಂದಾವನ) ರಕ್ಷಣೆಗಾಗಿ ಸೇಫ್ಟಿ ಗ್ರೀಲ್ ಅಳವಡಿಸುವ ಕಾರ್ಯ ನಡೆದಿದೆ.
ನಿಧಿ ಆಸೆಗಾಗಿ ಕಳ್ಳರು, ಕಳೆದ 2019ರ ಜುಲೈ 17ರಂದು ವಿಜಯನಗರದ ಅರಸರ ಗುರುಗಳಾಗಿದ್ದ ವ್ಯಾಸರಾಯರ ವೃಂದಾವನ ಅಗೆದು ಧ್ವಂಸ ಮಾಡಿದ್ದರು. ಈ ಘಟನೆ ಸಾಕಷ್ಟು ಭಕ್ತರಲ್ಲಿ ಅಘಾತಕ್ಕೆ ಕಾರಣವಾಗಿತ್ತು. ಹೀಗಾಗಿ ಇದೀಗ ತುಂಗಭದ್ರಾ ನಡುಗಡ್ಡೆಯಲ್ಲಿರುವ ವೃಂದಾವನಕ್ಕೆ ಸೇಫ್ಟಿ ಗ್ರೀಲ್ ಅಳವಡಿಸುವ ಕಾರ್ಯ ನಡೆದಿದೆ.
ಸ್ಥಳ ಮತ್ತು ಪೂಜೆಯ ವಾರಸತ್ವದ ವಿಚಾರವಾಗಿ ಉತ್ತರಾಧಿಮಠ ಹಾಗೂ ಮಂತ್ರಾಲಯದ ಮಠದ ಮಧ್ಯೆ ದಶಕಗಳ ಕಾಲದಿಂದಲೂ ವಿವಾದ ಇದ್ದಾಗ್ಯೂ ಕೂಡ, ಧಾರ್ಮಿಕ ತಾಣದ ರಕ್ಷಣೆಯ ವಿಚಾರದಲ್ಲಿ ಎರಡೂ ಮಠದ ಸ್ವಾಮೀಜಿಗಳು ಮುಂದಾಗಿರುವುದು ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.
ನವ ವೃಂದಾವನದ ಗಡ್ಡೆಗೆ ಬರುವ ಭಕ್ತಾಧಿಗಳಿಗೆ ಇದುವರೆಗೂ ನೇರವಾಗಿ ಯತಿಗಳ ವೃಂದಾವನ್ನು ಸ್ಪರ್ಶಿಸಿ ದರ್ಶಿಸುವ ಅಥವಾ ನಮಿಸುವ ಅವಕಾಶವಿತ್ತು. ಆದರೆ, ಸೇಫ್ಟಿ ಗ್ರೀಲ್ಸ್ ಅಳವಡಿಸಿದ ಬಳಿಕ ಕೇವಲ ಗೇಟ್ ಆಚೆ ನಿಂತು ದೈವ ದರ್ಶನ ಮಾಡಿಕೊಳ್ಳಬೇಕಾದ ಸಾಧ್ಯತೆಗಳಿವೆ.