ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ತಮ್ಮ ಪತ್ನಿ ಕಾನೂನುಬಾಹಿರವಾಗಿ ನಿವೇಶನ ಪಡೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಹೈಕೋರ್ಟ್‌ನಲ್ಲಿ ಇಂದು ಮುಂದುವರಿಯಲಿದೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ನ್ಯಾಯಪೀಠದಲ್ಲಿ ಮಧ್ಯಾಹ್ನ 4:30ಕ್ಕೆ ವಿಚಾರಣೆ ನಡೆಯಲಿದೆ.
ಮುಖ್ಯಮಂತ್ರಿಗಳ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಲಿದ್ದಾರೆ.
ಈ ಅರ್ಜಿ ಸಂಬಂಧ ಸೆ.2ರಂದು ನಡೆದ ವಿಚಾರಣೆ ವೇಳೆ ಸಿಎಂ ವಿರುದ್ಧದ ದೂರುದಾರ ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಕೆ.ಜಿ.ರಾಘವನ್ ವಾದ ಮಂಡಿಸಿದ್ದರು. ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ನೀಡಿರುವ ಅನುಮತಿ ಆದೇಶವನ್ನು ವಿರೋಧಾತ್ಮಕವಾಗಿ ನೋಡದೆ ಸಾರ್ವಜನಿಕ ಆಡಳಿತದಲ್ಲಿ ಪರಿಶುದ್ಧತೆಯ ಸಲುವಾಗಿ ನೋಡಬೇಕಾಗುತ್ತದೆ ಎಂದು ಕೆ.ಜಿ.ರಾಘವನ್ ಹೈಕೋರ್ಟ್‌ಗೆ ಮನವಿ ಮಾಡಿದ್ದರು.
ಕಾನೂನುಬಾಹಿರವಾಗಿ ಲಾಭ ಪಡೆಯದಿದ್ದರೂ ಪ್ರಭಾವ ಬಳಸಿ ಲಾಭ ಗಳಿಸುವುದು ಭ್ರಷ್ಟಾಚಾರಕ್ಕೆ ಸಮಾನವಾದದ್ದು. ಸಾರ್ವಜನಿಕರಿಗೆ ಶುದ್ಧ ಆಡಳಿತದಲ್ಲಿ ನಂಬಿಕೆ ಇರುವಂತಿರಬೇಕು. ಈ ಹಗರಣ ಕೇವಲ ಇಬ್ಬರ ನಡುವಿನ ಪ್ರಕರಣವಲ್ಲ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ್ದಾಗಿದೆ. ಇದು ಸಾರ್ವಜನಿಕ ನಂಬಿಕೆ ಹಾಳಾಗಿರುವುದಕ್ಕೆ ಉತ್ತರ. ಉನ್ನತ ಸಾಂವಿಧಾನಿಕ ಹುದ್ದೆ ಅಲಂಕರಿಸಿರುವ ವ್ಯಕ್ತಿಯ ವಿರುದ್ಧ ತನಿಖೆ ಕೋರಲಾಗಿದೆ. ಕೊನೆಯಲ್ಲಿ ಸಿದ್ದರಾಮಯ್ಯ ಅವರು ಆರೋಪಮುಕ್ತವಾಗಬಹುದು. ಆದರೆ, ನ್ಯಾಯಾಲಯವು ಇಂಥ ವಿಚಾರಗಳಲ್ಲಿ ತನಿಖೆಗೆ ಅವಕಾಶ ನೀಡಬೇಕಾಗುತ್ತದೆ ಎಂದು ಕೆ.ಜಿ.ರಾಘವನ್ ವಾದಿಸಿದ್ದರು.
ಈ ವಾದ ಆಲಿಸಿದ್ದ ನ್ಯಾಯಾಲಯವು ಮಧ್ಯಂತರ ಆದೇಶ ವಿಸ್ತರಿಸಿ, ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರ ಕೋರಿಕೆಯಂತೆ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿತ್ತು.