ಗಂಗಾವತಿ: ರಸ್ತೆ ಅಭಿವೃದ್ಧಿ ಕಾಮಗಾರಿ ಗುತ್ತಿಗೆ ಪಡೆದುಕೊಂಡಿದ್ದ ಕಾಂಟ್ರಾಕ್ಟರ್ ಕಾಮಗಾರಿಯ ಮೊದಲ ಹಂತದ ನೆಲ ಅಗೆಯುವ ಕೆಲಸ ಮಾಡಿ ಕಳೆದ ಆರು ತಿಂಗಳಿಂದ ನಾಪತ್ತೆಯಾದ ಘಟನೆ ನಗರದಲ್ಲಿ ನಡೆದಿದೆ.
ನಗರದ ಐದನೇ ವಾರ್ಡ್ನ ಕಿಲ್ಲಾ ಏರಿಯಾದಲ್ಲಿ ಈ ಘಟನೆ ನಡೆದಿದ್ದು, ಜೈನ್ ಮಂದಿರದಿಂದ ಅಶೋಕ ಪಾಟೀಲ ಮನೆಯವರೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಕಿತ್ತು ಹಾಕಲಾಗಿದೆ. ಇದರಿಂದಾಗಿ ಜನ ಈ ರಸ್ತೆಯಲ್ಲಿ ಸಂಚರಿಸಲು ನಿತ್ಯವೂ ಪರದಾಡುವಂತಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ವಾರ್ಡ್ ಸದಸ್ಯ ಉಸ್ಮಾನ್ ಬಿಚ್ಚುಗತ್ತಿ, 300 ಮೀಟರ್ ಇರುವ ಈ ರಸ್ತೆಯ ಅಭಿವೃದ್ಧಿಗೆಂದು ಸಿಎಂ ಸ್ಪೆಷಲ್ ಗ್ರಾಂಟ್ನಲ್ಲಿ 13 ಲಕ್ಷ ರೂ. ತೆಗೆದಿರಿಸಲಾಗಿತ್ತು. ನಾಗಮಲ್ಲೇಶ ಎಂಬ ಗುತ್ತಿಗೆದಾರ ಕಾಮಗಾರಿ ವಹಿಸಿಕೊಂಡಿದ್ದನು. ಆದರೆ ಕಾಮಗಾರಿ ವಹಿಸಿಕೊಂಡ ಗುತ್ತಿಗೆದಾರ ಹೇಳದೆ ಕೇಳದೆ ಕಾಮಗಾರಿ ಕೈಬಿಟ್ಟಿದ್ದಾನೆ. ಇದರಿಂದ ಜನರ ಓಡಾಟಕ್ಕೆ ಸಾಕಷ್ಟು ಸಮಸ್ಯೆಯಾಗಿದೆ. ನೂರಾರು ಬಾರಿ ಕರೆ ಮಾಡಿದರೂ ಗುತ್ತಿಗೆದಾರ ಕರೆ ಸ್ವೀಕರಿಸದೆ ಬೇಜವಾಬ್ದಾರಿಯಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.