ಕುಷ್ಟಗಿ(ಕೊಪ್ಪಳ): ಕುಷ್ಟಗಿ ಪಟ್ಟಣದಿಂದ ಗಜೇಂದ್ರಗಡ ಮಾರ್ಗದಲ್ಲಿ ನಿಡಶೇಷಿ ಕೆರೆ ಪಕ್ಕದ ರಾಜ್ಯ ಹೆದ್ದಾರಿಯಲ್ಲಿ ತೆರೆದ ಗುಂಡಿ ಸೃಷ್ಟಿಯಾಗಿದೆ. ಆದಾಗ್ಯೂ ಲೋಕೋಪಯೋಗಿ ಇಲಾಖೆ ಕಣ್ತೆರೆಯದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ರಾಜ್ಯ ಹೆದ್ದಾರಿಯಲ್ಲಿ ಆಗಿರುವ ಅವಾಂತರಕ್ಕೆ ಏನೂ ತಿಳಿಯದ ವಾಹನ ಚಾಲಕರು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಮಳೆ ನೀರು ನಿಲ್ಲುತ್ತಿರುವ ಹಿನ್ನೆಯಲ್ಲಿ ರಸ್ತೆಯ ಇಂಚು ಬಿಡದೇ ನೀರು ಆಕ್ರಮಿಸಿದೆ.
ಮಳೆಯಿಂದ ನೀರು ನಿಲ್ಲುತ್ತಿರುವ ಬಗ್ಗೆ ನಿತ್ಯ ಸಂಚರಿಸುವರಿಗೆ ತಿಳಿದಿದ್ದು, ಈ ಗುಂಡಿ ಭೀತಿಯಿಂದ ಸೈಡ್ಗೆ ಹೋಗುತ್ತಿದ್ದಾರೆ. ಈ ಹಿನ್ನೆಲೆ ಅಷ್ಟಾಗಿ ತೊಂದರೆ ಕಂಡು ಬಂದಿಲ್ಲ. ಆದರೆ ಅನ್ಯ ಜಿಲ್ಲೆ, ಇತರ ರಾಜ್ಯಗಳ ವಾಹನ ಸವಾರರಿಗೆ ಇಲ್ಲಿ ಗುಂಡಿ ಇರುವುದು ಗೊತ್ತಾಗದೇ ಗುಂಡಿಗೆ ಕುಸಿಯುತ್ತಿದ್ದು, ಇದರಿಂದ ವಾಹನದ ಎಕ್ಸೆಲ್ ಪಟ್ಟಿ ಕಟ್ ಆಗುತ್ತಿದೆ.
ದಿನವೂ ಒಂದೆರೆಡು ವಾಹನಗಳು ಈ ತೊಂದರೆ ಅನುಭವಿಸೋದು ಸಾಮಾನ್ಯವಾಗಿದೆ. ಆದರೆ, ಲೋಕೋಪಯೋಗಿ ಇಲಾಖೆ ಈ ಹೆದ್ದಾರಿ ದುರಸ್ತಿ ಮಾಡಿಸದೇ ನಿರ್ಲಕ್ಷವಹಿಸಿದೆ ಎಂದು ಕುಷ್ಟಗಿಯ ಸಣ್ಣ ದುರಗಪ್ಪ ವಡಿಗೇರಿ ಆಕ್ಷೇಪಿಸಿದ್ದಾರೆ. ಈ ರಾಜ್ಯ ಹೆದ್ದಾರಿ ಅವಸ್ಥೆ ಬಗ್ಗೆ ಇಲಾಖೆಯ ಎಇಇ ಎಚ್. ಬಿ. ಕಂಠಿ ಅವರ ಗಮನಕ್ಕೆ ತಂದರೂ ಜಲ್ಲಿ ಕಲ್ಲು ಹಾಕಿ ಭರ್ತಿ ಮಾಡುವಷ್ಟು ಪುರಸೊತ್ತಿಲ್ಲ ಎಂದು ಹೇಳಿದ್ದಾರೆ.