ಗಂಗಾವತಿ : ನಮ್ಮೂರಿನ ಹುಡುಗರಿಗೆ ಕನ್ಯೆ ಕೊಡಲು ಯಾವ ಊರಿನವರು ಮುಂದೆ ಬರುತ್ತಿಲ್ಲ. ಪರಿಣಾಮ ಊರಿನ ಹುಡುಗರಿಗೆ ವಯಸ್ಸಾಗುತ್ತಿದ್ದರೂ ಮದುವೆಯಾಗುತ್ತಿಲ್ಲ. ಏನಾದರೂ ಮಾಡಿ ನಮ್ಮೂರಿನ ಹುಡುಗರಿಗೆ ಮದುವೆಯಾಗುವ ರೀತಿ ಮಾಡಿ ಪುಣ್ಯ ಕಟ್ಟಿಕೊಳ್ಳಿ..
ಹೀಗೆಂದು ಮರಳಿ ಹೋಬಳಿಯ ಮಸಾರಿ ಕ್ಯಾಂಪ್ ಗುಳದಾಳ ಗ್ರಾಮದ ಜನ, ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಹಾಗೂ ಶಾಸಕ ಬಸವರಾಜ ಅವರ ಮುಂದೆ ಮನವಿ ಮಾಡಿದ್ದಾರೆ. ಹಣವಾಳ ಗ್ರಾಮ ಪಂಚಾಯತ್ ನ ಮಸಾರಿ ಗುಳದಾಳ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗೆ ಜನ ಭಾವನಾತ್ಮಕವಾಗಿ ಇಂತಹ ಮನವಿ ಸಲ್ಲಿಸಿದರು.
ಗ್ರಾಮಕ್ಕೆ ಕಳೆದ 60 ವರ್ಷದಿಂದ ಅಧಿಕೃತ ರಸ್ತೆಯಿಲ್ಲ. ತುಂಗಭದ್ರಾ ಎಡದಂಡೆ ನಾಲೆಯ ಮೇಲಿರುವ ತಗ್ಗು ದಿನ್ನೆಗಳ ರಸ್ತೆಯ ಮೇಲೆ ಸಂಚರಿಸಬೇಕು. ಮಕ್ಕಳ ಶಾಲಾ-ಕಾಲೇಜಿಗೂ ತೊಂದರೆಯಾಗಿದೆ.
ಹೆರಿಗೆಗೆ, ಚಿಕಿತ್ಸೆ ಪಡೆಯಲು ವೃದ್ಧರು, ಮಹಿಳೆಯರು ಮತ್ತು ಮಕ್ಕಳನ್ನು ಸಮೀಪದ ಗ್ರಾಮಕ್ಕೆ ಇಲ್ಲವೇ ಗಂಗಾವತಿಗೆ ಕರೆದೊಯ್ಯಲು ಸಮಸ್ಯೆಯಾಗುತ್ತಿದೆ. ರಸ್ತೆ ಇಲ್ಲದ್ದರಿಂದ ವಾಹನಗಳ ಸಂಚಾರವಿಲ್ಲ.
ಹೀಗಾಗಿ, ರಸ್ತೆಯೇ ಇಲ್ಲದ ನಮ್ಮೂರಿನ ಹುಡುಗರಿಗೆ ಯಾರೊಬ್ಬರು ಕನ್ಯೆ ನೀಡಲು ಮುಂದಾಗುತ್ತಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ರಸ್ತೆ ಮಾಡಿ ಕೊಡುವುದಾಗಿ ಭರವಸೆ ನೀಡಿದರು.