ಗಂಗಾವತಿ: ತಾಲ್ಲೂಕಿನ ಹಣವಾಳ ಗ್ರಾಮದ ಮೂಲಕ ಹಾದು ಹೋಗಿರುವ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಮೇಲ್ದರ್ಜಗೇರಿಸಿದ್ದು ವಿವಾದ ಹುಟ್ಟುಹಾಕಿದೆ.
ಲೋಕೋಪಯೋಗಿ ಇಲಾಖೆ ರಾಜ್ಯ ಹೆದ್ದಾರಿಯನ್ನಾಗಿ ಪರಿವರ್ತಿಸಿ ಮೇಲ್ದರ್ಜಗೇರಿಸಿದ್ದು, ವಾಸ್ತವವಾಗಿ 9 ಮೀಟರ್ ಅಳತೆಯ ರಸ್ತೆ ನಿರ್ಮಾಣ ಮಾಡಬೇಕಿತ್ತು. ಆದರೆ ರಸ್ತೆಯ ಒಂದು ಭಾಗದಲ್ಲಿ ಈಗಾಗಲೇ ಎರಡು ಮೀಟರ್ನಷ್ಟು ರಸ್ತೆಯನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಿಸಿದ್ದಾರೆ.
ಒತ್ತುವರಿ ಮಾಡಿದ ರಸ್ತೆಯನ್ನು ತೆರವು ಮಾಡಬೇಕು. ಇಲ್ಲವಾದಲ್ಲಿ ರಸ್ತೆಯ ಮತ್ತೊಂದು ಬದಿಯಲ್ಲಿ ತಮಗೂ ಎರಡು ಮೀಟರ್ ಜಾಗ ಬಿಟ್ಟು ರಸ್ತೆ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯ ಯುವಕರ ಗುಂಪು ಪಟ್ಟು ಹಿಡಿದಿದೆ.
ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಗಂಗಾವತಿ ಗ್ರಾಮೀಣ ಸಿಪಿಐ ಸುರೇಶ ತಳವಾರ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಆದರೆ ಒಂದು ಗುಂಪಿನ ಯುವಕರು ಪೊಲೀಸ್ ಅಧಿಕಾರಿಯ ಸಂಧಾನಕ್ಕೆ ಒಪ್ಪಲಿಲ್ಲ. ಹೀಗಾಗಿ ಮತ್ತೆ ಸಭೆ ನಡೆಸುವುದಾಗಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.