ಕೊಪ್ಪಳ : ರೈತರಿಗೆ ಪ್ರತಿ ವರ್ಷ ಒಂದಲ್ಲೊಂದು ಸಂಕಷ್ಟ. ಬೆಳೆ ಬಂದಾಗ ಬೆಲೆ ಇಲ್ಲ, ಬೆಲೆ ಇದ್ದಾಗ ಬೆಳೆಯಿಲ್ಲ ಅನ್ನೋ ಮಾತು ಕೊಪ್ಪಳ ಜಿಲ್ಲೆಯ ಭತ್ತ ಬೆಳೆಯುವ ಅನ್ನದಾತರ ಪಾಲಿಗೂ ನಿಜವಾಗಿದೆ. ತುಂಗಭದ್ರಾ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಬರುವ ಕೊಪ್ಪಳ ಜಿಲ್ಲೆಯ ಗಂಗಾವತಿ, ಕಾರಟಗಿ ಭಾಗದಲ್ಲಿ ಉತ್ತಮ ಗುಣಮಟ್ಟದ ಭತ್ತ ಬೆಳೆಯುತ್ತಾರೆ. ಹೀಗಾಗಿ, ಗಂಗಾವತಿಯನ್ನು ಭತ್ತದ ಕಣಜ ಎಂದು ಕರೆಯುತ್ತಾರೆ. ಜಿಲ್ಲೆಯ ಸುಮಾರು 48 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಭತ್ತ ಬೆಳೆಯಲಾಗಿದೆ.
ಪ್ರತಿ ಎಕರೆಗೆ ಸುಮಾರು 35 ರಿಂದ 40 ಚೀಲ ಭತ್ತವನ್ನು ರೈತರು ಬೆಳೆದಿದ್ದಾರೆ. ಆದರೆ, ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್‌ಡೌನ್ ಪರಿಣಾಮದಿಂದ ಭತ್ತದ ದರ 75 ಭರ್ತಿಗೆ ಕೆಜಿ ಕೇವಲ ಒಂದು ಸಾವಿರ ರುಪಾಯಿಯಿಂದ 1200 ರೂಪಾಯಿ ದರಕ್ಕೆ ಬಹುಪಾಲು ರೈತರು ಮಾರಾಟ ಮಾಡಿದ್ದಾರೆ. ಎಲ್ಲೋ ಒಬ್ಬ ರೈತರು ಮಾತ್ರ ಬೆಳೆದ ಭತ್ತವನ್ನು ಗೋದಾಮಿನಲ್ಲಿಟ್ಟುಕೊಂಡು ಈಗ ಮಾರಾಟ ಮಾಡುತ್ತಿದ್ದಾರೆ.
ಆದರೆ, ಶೇ.90ರಷ್ಟು ರೈತರು ಆಗಲೇ ಭತ್ತ ಮಾರಾಟ ಮಾಡಿದ್ದಾರೆ. ಇದೀಗ ಭತ್ತದ ದರ 75 ಕೆಜಿ ಭರ್ತಿಗೆ 1,500 ರೂಪಾಯಿನಿಂದ 1,800 ರೂಪಾಯಿಗೆ ಏರಿಕೆಯಾಗಿದೆ. ಭತ್ತದ ದರ ಏರಿಕೆ ರೈತರಿಗಿಂತ ವ್ಯಾಪಾರಿಗಳಿಗೆ ಹೆಚ್ಚು ಅನುಕೂಲವಾಗಿದೆ.
ಜಿಲ್ಲೆಯ ಗಂಗಾವತಿ, ಕಾರಟಗಿಯ ಕೃಷಿ ಉತ್ಪನ್ನ ಮಾರುಟ್ಟೆಯಲ್ಲಿ ಏಪ್ರಿಲ್ ತಿಂಗಳಲ್ಲಿ ಒಟ್ಟು 6,04,224 ಕ್ವಿಂಟಲ್, ಮೇ ತಿಂಗಳಲ್ಲಿ 4,40,235 ಕ್ವಿಂಟಲ್ ಹಾಗೂ ಜೂನ್ ತಿಂಗಳಲ್ಲಿ 4,78,386 ಕ್ವಿಂಟಲ್ ಭತ್ತ ಮಾರಾಟ ಮಾಡಲಾಗಿದೆ. ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿಕೊಳ್ಳಲು ರೈತರು ಹಿಂದೇಟು ಹಾಕಿದ್ದಾರೆ.
ನೋಂದಣಿ ದಿನಾಂಕ ಮುಗಿದ ಬಳಿಕ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಸೂಚನೆಯಂತೆ ಮತ್ತೆ ಮರು ನೋಂದಣಿಗೆ ಅವಕಾಶ ಕಲ್ಪಿಸಿದಾಗ, ಕೇವಲ ಇಬ್ಬರು ರೈತರು ಮಾತ್ರ ನೋಂದಣಿ ಮಾಡಿಕೊಂಡರು. ಆದರೆ, ಅವರು ಇಲ್ಲಿ ಭತ್ತ ಮಾರಾಟ ಮಾಡಲಿಲ್ಲ ಎನ್ನುತ್ತಾರೆ ಕೃಷಿ ಉತ್ಪನ್ನ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಶ್ಯಾಮ್. ಈಗ ಭತ್ತದ ಬೆಲೆಯಲ್ಲಿ ಏರಿಕೆಯಾಗಿದೆ. ಅತ್ತ ಅಕ್ಕಿಯ ದರವೂ ಏರಿದೆ. ಆದರೆ, ಇದರ ಲಾಭ ಅಕ್ಕಿ ಗಿರಣಿಗಳ ಮಾಲೀಕರು ಹಾಗೂ ವ್ಯಾಪಾರಿಗಳ ಪಾಲಾಗಿದೆ.