ಗಂಗಾವತಿ (ಕೊಪ್ಪಳ) : ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಕೊಪ್ಪಳ ಜಿಲ್ಲಾ ಪ್ರವಾಸ ಕೈಗೊಂಡು ಸಮಾವೇಶಗಳನ್ನು ಹಮ್ಮಿಕೊಳ್ಳುವ ಮೂಲಕ ಅಬ್ಬರಕ್ಕೆ ಚಾಲನೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮಾಜಿ ಸಚಿವ ಜಿ. ಜನಾರ್ದನರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರೈತ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ. ಈ ಬಗ್ಗೆ ಪಕ್ಷದಿಂದ ಅಧಿಕೃತ ಮಾಹಿತಿ ಬಿಡುಗಡೆ ಮಾಡಲಾಗಿದ್ದು, ರೈತ ಮಹಿಳೆ ಮತ್ತು ಪುರುಷ ರೈತರ ಪಾದಪೂಜೆ ಮಾಡುವ ಮೂಲಕ ಕೆಆರ್ಪಿ ಸಂಸ್ಥಾಪಕ ಜನಾರ್ದನ ರೆಡ್ಡಿ ಹಾಗೂ ಪತ್ನಿ ಲಕ್ಷ್ಮಿ ಅರುಣಾ ರೈತ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.
ಪ್ರಣಾಳಿಕೆಯಲ್ಲಿ ಏನೆಲ್ಲಾ ಇದೆ..? : ರೈತರನ್ನು ಕೆಆರ್ಪಿಯತ್ತ ಸೆಳೆಯುವ ನಿಟ್ಟಿನಲ್ಲಿ ನಾನಾ ಯೋಜನೆಗಳನ್ನು ರೆಡ್ಡಿ ಘೋಷಣೆ ಮಾಡಿದ್ದಾರೆ. ಬಸವೇಶ್ವರ ಜಲಯಜ್ಞ ಎಂಬ ಹೆಸರಿನಲ್ಲಿ ಏತ ನೀರಾವರಿ ಯೋಜನೆ ಜಾರಿಗೊಳಿಸಿ ಆ ಮೂಲಕ ರೈತರ ಪ್ರತಿ ಎಕರೆಗೆ ನೀರು ಒದಗಿಸುವ ಬಗ್ಗೆ ಭರವಸೆ ನೀಡಿದ್ದಾರೆ. ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ನವಲಿಯ ಸಮಾನಾಂತರ ಜಲಾಶಯ ನಿರ್ಮಾಣ. ಆ ಜಲಾಶಯದಿಂದ ರೈತರಿಗೆ ಮೀನುಗಳಿಗೆ 30 ಟಿಎಂಸಿ ನೀರು ಒದಗಿಸಿ, ರೈತರ ಜಮೀನುಗಳಿಗೆ ನಿರಂತರ 9ಗಂಟೆ ವಿದ್ಯುತ್ ಒದಗಿಸುವ ಯೋಜನೆ ಘೋಷಣೆ ಮಾಡಿದ್ದಾರೆ.
ರೈತರಿಗೆ ವರ್ಷಕ್ಕೆ 15 ಸಾವಿರ : ರೈತ ಭರವಸೆ ಯೋಜನೆ ಘೋಷಣೆ ಮಾಡಿದ್ದು ಈಗಾಗಲೆ ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಷಕ್ಕೆ ತಲಾ ಎರಡು ಸಾವಿರ ರೂಪಾಯಿಯಂತೆ ಆರು ಸಾವಿರ ಜಮೆ ಮಾಡುತ್ತಿದೆ. ಇದೇ ಮಾದರಿಯಲ್ಲಿ ಕೆಆರ್ಪಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 15ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಡುವ ಭರವಸೆ ನೀಡಿದ್ದಾರೆ. ರೈತ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಂಬಲ ಬೆಲೆ, ಬೆಳೆದ ಬೆಲೆಗೆ ರೈತರೇ ಬೆಲೆ ನಿಗದಿ ಮಾಡುವ ಯೋಜನೆ ಜಾರಿಗೆ ಮಾಡುವ ಬಗ್ಗೆ ಘೋಷಣೆ ಮಾಡಿದ್ದಾರೆ. ಅಲ್ಲದೇ ಪ್ರತಿ ಹೋಬಳಿಗೊಂದು ರೈತ ಮಾರುಕಟ್ಟೆ ವಿಸ್ತರಣೆಯ ಬಗ್ಗೆ ಯೋಜನೆ ರೂಪಿಸಲಾಗಿದೆ.
ರೆಡ್ಡಿ ಇದ್ದರೆ ಮಾತ್ರ ಅಬ್ಬರ : ಗಂಗಾವತಿಯ ಚುನಾವಣೆಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಅನ್ಸಾರಿ ಈಗಾಗಲೇ ಒಂದು ತಿಂಗಳಿಂದ ವಾರ್ಡನ್ಲ್ಲಿ ಮನೆಮನೆಗೆ ಭೇಟಿ ನೀಡುತ್ತಿದ್ದು, ಇತ್ತ ಕೆಆರ್ಪಿ ರೋಡ್ ಶೋ, ಪಕ್ಷಕ್ಕೆ ಸೇರ್ಪಡೆ ಮೂಲಕ ಗಮನ ಸೆಳೆದಿತ್ತು. ಆದರೆ ಇದುವರೆಗೂ ಅಬ್ಬರದ ಪ್ರಚಾರದ ಕೊರತೆ ಎದುರಿಸುತ್ತಿದ್ದ ಬಿಜೆಪಿ ಇದೀಗ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ಕರೆಯಿಸಿ ಸಮಾವೇಶ ಹಮ್ಮಿಕೊಳ್ಳುವ ಮೂಲಕ ಬಿಜೆಪಿ ಪ್ರಚಾರದ ಭರಾಟೆಗೆ ಮುಂದಾಗಿದೆ.
ಇದನ್ನೂ ಓದಿ :ರೆಡ್ಡಿಯ ಸಂಕಷ್ಟ ನಿವಾರಣೆಗೆ ಶಬರಿಮಲೆ ಅಯ್ಯಪ್ಪನ ಮೊರೆ ಹೋದ ಭಕ್ತ.. ರೆಡ್ಡಿ ಮೇಲಿನ ಪ್ರಕರಣಗಳು ಇತ್ಯರ್ಥಕ್ಕಾಗಿ ಹರಕೆ