ಕೊಪ್ಪಳ: ರಾಜ್ಯೋತ್ಸವ ಹಾಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೊಪ್ಪಳ ಜಿಲ್ಲೆಯ ಹಿರಿಯ ಸಾಹಿತಿ ವಿಠ್ಠಪ್ಪ ಗೋರಂಟ್ಲಿ (79) ಅವರು ಕಡಿಮೆ ರಕ್ತದೊತ್ತಡ ಉಂಟಾದ ಪರಿಣಾಮ ಹೃದಯಾಘಾತ ಸಂಭವಿಸಿ ಕೊನೆಯುಸಿರೆಳೆದಿದ್ದಾರೆ. ಇವರು ಇಬ್ಬರು ಪುತ್ರರು, ಪತ್ನಿಯನ್ನು ಅಗಲಿದ್ದಾರೆ.
ಲಂಕೇಶ್, ಹಾಯ್ ಬೆಂಗಳೂರು, ಸುದ್ದಿಮೂಲ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಇತ್ತೀಚಿಗೆ ನಡೆದ ದಲಿತ ದಮನಿತರ ಹೋರಾಟದಲ್ಲಿ ಭಾಗಿಯಾಗಿದ್ದರು. ಕಳೆದ ದಿನ ಸಂಜೆ ಆಕಾಶವಾಣಿಯಲ್ಲಿ ಅವರ ಚಿಂತನೆ ಪ್ರಸಾರವಾಗಿತ್ತು.
ಜಿಲ್ಲಾ ಹೋರಾಟ, ಕುದುರೆಮೋತಿ ಹೋರಾಟದಲ್ಲಿ ಪ್ರಮುಖ ಹೋರಾಟಗಾರರಾಗಿದ್ದ ವಿಠ್ಠಪ್ಪ ಗೋರಂಟ್ಲಿ ಅವರು ಕೇವಲ 4ನೇ ತರಗತಿ ಓದಿದ್ದರೂ ಸಹ ಭಗವದ್ಗೀತೆ, ವೇದ ಉಪನಿಷತ್ತನ್ನು ಆಳವಾಗಿ ಅಧ್ಯಯನ ಮಾಡಿದ್ದರು. ಹಲವಾರು ಕೃತಿಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ ವಿವಿಧ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.