ಗಂಗಾವತಿ: ಅಕಾಲಿಕ ಮಳೆಯಿಂದ ತಾಲೂಕಿನಲ್ಲಿ ಭಾರೀ ಪ್ರಮಾಣದ ಬೆಳೆ ನಾಶವಾಗಿದೆ.
ತಾಲೂಕಿನ ಗ್ರಾಮೀಣ ಭಾಗಗಳಾದ ಕಲ್ಗುಡಿ, ಶ್ರೀರಾಮನಗರ, ಮರಳಿ, ಸಿದ್ದಾಪುರ, ಗುಳ್ಳದಳ್ಳಿ, ಮಸಾರಿಕ್ಯಾಂಪ್, ಹೇರೂರು, ಕೆಸರಟ್ಟಿ, ಮಲಕನಮರಡಿ, ಬಾಪಿರೆಡ್ಡಿ ಕ್ಯಾಂಪ್, ಭಟ್ಟರಹಂಚಿನಾಳ, ಗೋನಾಳಗಳಲ್ಲಿ ಭಾರಿ ಪ್ರಮಾಣದ ಮಳೆಯಾಗಿದೆ. ಕೆಲ ಗ್ರಾಮಗಳಲ್ಲಿ ಆಲಿಕಲ್ಲು ಮಳೆ ಬಿದ್ದಿದ್ದು, ಹೊಲ ಗದ್ದೆಗಳಲ್ಲಿ ಬೆಳೆದು ನಿಂತಿದ್ದ ಭತ್ತದ ಬೆಳೆ ನೆಲಕಚ್ಚಿದೆ.
ಆನೆಗೊಂದಿ ಭಾಗದಲ್ಲಿನ ವರುಣನ ಆರ್ಭಟಕ್ಕೆ ಸೊಂಪಾಗಿ ಬೆಳೆದಿದ್ದ ಬಾಳೆ ನಾಶವಾಗಿದೆ. ವೆಂಕಟಗಿರಿ ಭಾಗದಲ್ಲಿ ತೋಟಗಾರಿಕಾ ಬೆಳೆಗಳಾದ ಪಪ್ಪಾಯಿ, ಮಾವಿನ ಚಿಗುರು ಉದುರಿದೆ. ಹೊಸಳ್ಳಿ ಗ್ರಾಮದಲ್ಲಿ ನೂರಾರು ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಹಣವಾಳ, ಗುಂಡೂರು, ಸಿಂಗನಾಳ, ಸಿಂಗನಾಳ ಕ್ಯಾಂಪ್ ಮೊದಲಾದ ಗ್ರಾಮಗಳಲ್ಲಿ ನೀರಿನ ರಭಸಕ್ಕೆ ರಸ್ತೆ ಕೊಚ್ಚಿ ಹೋಗಿದೆ.