ಕೊಪ್ಪಳ: ಜಮೀನು ದಾಖಲೆಗಳನ್ನು ಸರಿಪಡಿಸಿಕೊಡುವಂತೆ ಆಗ್ರಹಿಸಿ ಜಿಲ್ಲೆಯ ಯಲಬುರ್ಗಾ ತಹಸೀಲ್ದಾರ ಕಚೇರಿ ಮುಂದೆ ಚಲವಾದಿ ಮಹಾಸಭಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಯಲಬುರ್ಗಾ ಪಟ್ಟಣದ ಸರ್ವೆ ನಂಬರ್ 226, 227, 228, 229 ರಲ್ಲಿ ಚಲವಾದಿ ಸಮುದಾಯದ ಜನರ ಭೂಮಿ ಇದೆ. ಈ ಸರ್ವೆ ನಂಬರ್ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲಾತಿಗಳ ಸರಿಪಡಿಸಿಕೊಡುವಂತೆ ಸಂಬಂಧಿಸಿದ ಜನರು ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ.
ಈ ಜಮೀನುಗಳಲ್ಲಿ ರೈಲ್ವೆ ನಿಲ್ದಾಣ, ರಸ್ತೆ ನಿರ್ಮಾಣವಾಗಲಿದೆ. ಈ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಈಗಾಗಲೇ ನೋಟಿಸ್ ಸಹ ನೀಡಿದ್ದಾರೆ. ನೀಡಿರುವ ನೋಟಿಸ್ ಪ್ರಕಾರ ಇರುವ ಜಮೀನುಗಳು ಬೇರೆ ಇದ್ದು, ಸ್ಥಾನಿಕ ಜಮೀನುಗಳು ಬೇರೆ ಇವೆ. ಹೀಗಾಗಿ, ನಿಜವಾದ ಜಮೀನುದಾರರಿಗೆ ಸರಿಯಾದ ದಾಖಲೆಗಳನ್ನು ಒದಗಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.