ಕೊಪ್ಪಳ: ಜಿಲ್ಲೆಯ ಕುಷ್ಟಗಿ ಹಾಗೂ ಗಂಗಾವತಿ ಸೇರಿದಂತೆ ಜಿಲ್ಲೆಯ ಹಲವೆಡೆ ಜನವಿರೋಧಿ ಹಾಗೂ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು.
ಜನವಿರೋಧಿ ಹಾಗೂ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಸಾಹಿತ್ಯ ಭವನದ ಮುಂದೆ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಕುಷ್ಟಗಿ: ಇಲ್ಲಿನ ಬಸವೇಶ್ವರ ವೃತ್ತದ ಬಸವ ಭವನದ ಆವರಣದಲ್ಲಿ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರಾಷ್ಟ್ರೀಯ ಪ್ರತಿಭಟನಾ ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಕಳೆದ 6 ವರ್ಷಗಳಿಂದ ದೇಶದ ಜನತೆಗೆ ಪ್ರಧಾನಿ ಮೋದಿ ಸರ್ವಾಧಿಕಾರದಿಂದ ಅಚ್ಚೇ ದಿನಗಳಾಗಿಲ್ಲ ಬದಲಾಗಿ ಕಷ್ಟದ ದಿನಗಳಾಗಿವೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಆರ್.ಕೆ. ದೇಸಾಯಿ ಆರೋಪಿಸಿದರು. ದೇಶದ ಜನತೆ ಅಚ್ಚೇ ದಿನ ನಂಬಿ ಮೋಸ ಹೋಗಿದ್ದು ರೈತರಿಗೆ, ಕಾರ್ಮಿಕರಿಗೆ ಉಳಿಗಾಲವಲ್ಲದ ಕಾನೂನು ಜಾರಿಗೆ ಮುಂದಾಗಿರುವುದನ್ನು ಖಂಡಿಸಿದರು.
ಗಂಗಾವತಿ: ಗಂಗಾವತಿ ಹಾಗೂ ಕನಕಗಿರಿ ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯ ಬಳಿಕ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಇದೇ ವೇಳೆ ಮಾಜಿ ಸಂಸದ ಶಿವರಾಮಗೌಡ ಮಾತನಾಡಿ, ಆಳುವ ಸರ್ಕಾರಗಳು ತರಲು ಹೊರಟಿರುವ ಈ ಕಾಯ್ದೆಗಳಿಂದ ಕೃಷಿ ಭೂಮಿ ನಾಶವಾಗಿ ಜಮೀನು ಕೇವಲ ಉದ್ಯಮಿಗಳು, ಹಣವಂತರ ಪಾಲಾಗಲಿದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ಕೋಟ್ಯಂತರ ಜನರಿಗೆ ತೊಂದರೆಯಾಗಲಿದೆ ಎಂದರು.