ಗಂಗಾವತಿ : ಇಲ್ಲಿನ ಸರ್ಕಾರಿ ಪದವಿ ಕಾಲೇಜಿನಲ್ಲಿ ಕ್ಯಾಟಗರಿ-2ಬಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳಿಗೆ ಶುಲ್ಕ ಶೋಷಣೆಯಾಗುತ್ತಿದೆ. ಕೂಡಲೇ ಇದನ್ನ ಸರಿಪಡಿಸಬೇಕು ಎಂದು ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಆನೆಗೊಂದಿ ರಸ್ತೆಯ ಸರ್ಕಾರಿ ಪದವಿ ಕಾಲೇಜಿಗೆ ಎಸ್ಎಫ್ಐ ಸಂಘಟನೆಯ ನೇತೃತ್ವದಲ್ಲಿ ಮುತ್ತಿಗೆ ಹಾಕಿದ ವಿದ್ಯಾರ್ಥಿಗಳು ಪ್ರಾಂಶುಪಾಲ ಜಿ ಎನ್ ಹೆಬ್ಸೂರು ವಿರುದ್ಧ ಘೋಷಣೆ ಕೂಗಿದರು. ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಈ ಬಾರಿಯ ವಾರ್ಷಿಕ ಪರೀಕ್ಷೆಯ ಶುಲ್ಕದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಸೇರಿ ಇತರ ಕೆಲ ಸಮುದಾಯಕ್ಕೆ ವಿನಾಯಿತಿ ನೀಡಲಾಗಿದೆ.
ಆದರೆ, ಬಹುತೇಕ ಮುಸ್ಲಿಂ ಸಮುದಾಯ ಒಳಗೊಂಡ 2ಬಿ ಸಮುದಾಯದ ವಿದ್ಯಾರ್ಥಿಗಳಿಗೆ ಮಾತ್ರ ಯಾವುದೇ ವಿನಾಯತಿ ನೀಡದೇ ವಂಚಿಸಲಾಗಿದೆ. ಇದಕ್ಕೆ ಇಲ್ಲಿನ ಪ್ರಾಂಶುಪಾಲರ ನಿರ್ಲಕ್ಷ್ಯ ಧೋರಣೆಯೂ ಕಾರಣ ಎಂದು ಧರಣಿ ನಿರತ ವಿದ್ಯಾರ್ಥಿಗಳು ಆರೋಪಿಸಿ, ಶುಲ್ಕ ವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.