ಕೊಪ್ಪಳ : ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಂಚಮಸಾಲಿ ಸಮುದಾಯದ ಮುಖಂಡರು, ತಾವರಗೇರಾ ಪಟ್ಟಣದ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದಲ್ಲಿ ಸಿಎಂ ಯಡಿಯೂರಪ್ಪ ಅವರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿಯಾಗಿ ಸಮುದಾಯದ ಶ್ರೀಗಳ ನೇತೃತ್ವದಲ್ಲಿ ಪಾದಯಾತ್ರೆ ನಡೆಸುತ್ತಿದ್ದೇವೆ. ಈ ಹಿಂದೆ ಮೀಸಲಾತಿ ಕಲ್ಪಿಸುವುದಾಗಿ ಸಿಎಂ ಯಡಿಯೂರಪ್ಪ ಭರವಸೆ ನೀಡಿದ್ದರು. ಆದ್ರೀಗ 2ಎ ಮೀಸಲಾತಿ ಕಲ್ಪಿಸಲು ಆಗುವುದಿಲ್ಲ ಎಂಬ ನಿಲುವು ತಳೆದಿದ್ದಾರೆ. ಕೊಟ್ಟ ಮಾತಿನಂತೆ ಸಿಎಂ ಯಡಿಯೂರಪ್ಪ ನಡೆದುಕೊಳ್ಳಬೇಕು.
ನಮ್ಮ ಸಮುದಾಯಕ್ಕೆ 2ಎ ಮೀಸಲಾತಿ ಕೊಡಿ ಎಂದು ಕೇಳುತ್ತಿರೋದು ನಮ್ಮ ನ್ಯಾಯಯುತ ಬೇಡಿಕೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಉಪತಹಶೀಲ್ದಾರ್ ಮಂಜುಳಾ ಪತ್ತಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.