ಕೊಪ್ಪಳ: ಬಿದಿರಿನಿಂದ ತಯಾರಿಸುವ ಬುಟ್ಟಿ, ಮೊರ, ಬೀಸಣಿಕೆಯನ್ನು ಮನೆಯಲ್ಲಿ ವಿವಿಧ ಕೃಷಿ ಕಾರ್ಯಗಳಿಗೆ ಬಳಸಲಾಗುತ್ತದೆ. ಆದ್ರೆ ಈ ಬಿದರಿನ ವಸ್ತುಗಳ ತಯಾರಕರು ಈಗ ಸಂಕಷ್ಟದಲ್ಲಿದ್ದಾರೆ. ಇವುಗಳ ಬದಲಿಗೆ ಈಗ ಪ್ಲಾಸ್ಟಿಕ್ ಹಾಗು ರಬ್ಬರ್ ವಸ್ತುಗಳು ಮನೆಯನ್ನು ಆಕ್ರಮಿಸಿವೆ.
ಬಿದಿರಿನಿಂದ ಜೀವನೋಪಾಯ ಮಾಡುತ್ತಿದ್ದ ಮೇದಾರ ಸಮುದಾಯದವರು ಈಗ ಸಂಕಷ್ಟದಲ್ಲಿದ್ದು, ಈ ಕುಟುಂಬಗಳಿಗೆ ಕನಿಷ್ಠ ಒಂದು ಮನೆಯನ್ನು ಸಹ ಸರ್ಕಾರ ನೀಡಿಲ್ಲವಂತೆ. ಇದರಿಂದ ಬೇಸತ್ತ ಕರಕುಶಲ ಕೈಗಾರಿಕಾ ಮೇದಾರ ಮಹಿಳಾ ಕ್ಷೇಮಾಭಿವೃದ್ಧಿ ಸಂಘದಿಂದ ಬುಧವಾರ ಕೊಪ್ಪಳ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಪರಿಸರ ರಕ್ಷಣೆ, ಆರೋಗ್ಯ ದೃಷ್ಠಿಯಿಂದ ಪ್ಲಾಸ್ಟಿಕ್ ಬಳಕೆಯ ಮೇಲೆ ನಿಷೇಧವಿದ್ದರೂ ಜನರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಿಲ್ಲ. ಪ್ಲಾಸ್ಟಿಕ್ ಬಳಕೆ ತಡೆಯಬೇಕಾದ ಅಧಿಕಾರಿಗಳು ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ. ಬಿದಿರು ಕಲೆಯಿಂದ ಜೀವನ ನಡೆಸುತ್ತಿದ್ದ ಕೊಪ್ಪಳದ ಸುಮಾರು 200 ಕುಟುಂಬಗಳು ಸಂಕಷ್ಟ ಎದುರಿಸುತ್ತಿವೆ. ಬಿದಿರಿನಿಂದ ಸುಂದರವಾದ ಗೃಹಪಯೋಗಿ ವಸ್ತುಗಳನ್ನು ಮೇದಾರರು ತಯಾರಿಸುತ್ತಾರೆ. ಆದ್ರೆ ಈಗ ಈ ವಸ್ತುಗಳು ಮಾರಾಟವಾಗುತ್ತಿಲ್ಲ, ಹೀಗಾಗಿ ಇವರ ಜೀವನ ನಿರ್ವಹಣೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಬಿದಿರು ಕಲೆ ಉಳಿಸಲು ಅವರು ತಯಾರಿಸುವ ವಸ್ತುಗಳನ್ನು ಖರೀದಿಸಬೇಕು. ಮೇದಾರರ ಉದ್ಯೋಗಕ್ಕೆ ಉತ್ತೇಜನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಕೊಪ್ಪಳ ನಗರಸಭೆಯಿಂದ ಕಳೆದ 25 ವರ್ಷದಿಂದ ಮನೆಗಳನ್ನು ನೀಡಿ ಎಂದು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ತಾವು ತಯಾರಿಸಿದ ವಸ್ತುಗಳು ಮಾರಾಟವಾಗುತ್ತಿಲ್ಲ. ಇನ್ನೊಂದು ಕಡೆ ಉಳಿದುಕೊಳ್ಳಲು ಮನೆಗಳು ಸಹ ಇಲ್ಲ. ಹೀಗಾಗಿ, ಜಿಲ್ಲಾಡಳಿತವು ತಮ್ಮ ನೆರವಿಗೆ ಬರಬೇಕೆಂದು ಆಗ್ರಹಿಸಿ ಡಿಸಿ ಕಚೇರಿಯ ಮುಂದೆ ಕುಳಿತು ಬಿದಿರಿನಿಂದ ವಿವಿಧ ಗೃಹಪಯೋಗಿ ವಸ್ತುಗಳನ್ನು ತಯಾರಿಸಿ ಪ್ರತಿಭಟನೆ ನಡೆಸಿದರು.
ಓದಿ: 'ನಿಮಗೆ ತಾಕತ್ತಿದ್ರೆ ನಿಷೇಧಿಸಿ..': ಕರ್ನಾಟಕ ಸರ್ಕಾರಕ್ಕೆ ಸವಾಲು ಹಾಕಿ ಮತ್ತೆ ಎಂಇಎಸ್ ಪುಂಡಾಟ