ಕೊಪ್ಪಳ: ಅಂತಾರಾಷ್ಟ್ರೀಯ ಹಾಲಿನ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರ ಒಪ್ಪಂದ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ರಾಬಕೊ (ರಾಯಚೂರು, ಬಳ್ಳಾರಿ, ಕೊಪ್ಪಳ) ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಸದಸ್ಯರು ಮನವಿ ಸಲ್ಲಿಸಿದರು.
ಅಂತಾರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ಮಾರಾಟಕ್ಕೆ ಕೇಂದ್ರ ಸರ್ಕಾರ ಒಡಂಬಡಿಕೆ ಮಾಡಿಕೊಳ್ಳುತ್ತಿದೆ ಎಂಬ ಮಾಹಿತಿ ಇದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ದೇಶಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಈ ಒಡಂಬಡಿಕೆಯಾದರೆ ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲಿನ ಆಮದು ಸುಂಕ ರದ್ದಾಗುತ್ತದೆ. ವಿದೇಶಿ ಹಾಲು ಮತ್ತು ಹಾಲಿನ ಉತ್ಪನ್ನಗಳೊಂದಿಗೆ ದೇಶಿ ಹಾಲು ಹಾಗೂ ಹಾಲಿನ ಉತ್ಪನ್ನಗಳು ಪೈಪೋಟಿ ನೀಡಲು ಸಾಧ್ಯವಾಗೋದಿಲ್ಲ. ಕೊಪ್ಪಳ ಜಿಲ್ಲೆಯಲ್ಲಿ 230 ಹಾಲು ಉತ್ಪಾದಕರ ಸಹಕಾರ ಸಂಘಗಳ ಸುಮಾರು 25000 ಸಾವಿರ ರೈತರಿಗೆ ತೊಂದರೆಯಾಗಲಿದೆ. ಹೀಗಾಗಿ, ಅಂತಾರಾಷ್ಟ್ರೀಯ ಹಾಲು ಮತ್ತು ಹಾಲಿನ ಉತ್ಪನ್ನಗಳ ಮುಕ್ತ ಮಾರಾಟದ ಒಡಂಬಡಿಕೆಯನ್ನು ಕೇಂದ್ರ ಸರ್ಕಾರ ಕೈಬಿಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.