ಬೆಂಗಳೂರು: ನಮ್ಮ ಚೀಫ್ ಮಿನಿಸ್ಟರ್ ಹೇಳಿದ ಮೇಲೆ ಅದೇ ಫೈನಲ್, ತಕರಾರೇ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕುಮಾರಕೃಪಾ ಅತಿಥಿ ಗೃಹದಲ್ಲಿಂದು ಮಾತನಾಡಿದ ಅವರು, ಸಿಎಂ ಸ್ಥಾನದ ಒಪ್ಪಂದ ಆಗಿಲ್ಲ ಎಂಬ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸುತ್ತಾ, ಅವರು ಏನು ಹೇಳ್ತಾರೋ ಅದು ಫೈನಲ್. ಐ ಆ್ಯಮ್ ಆಲ್ವೇಸ್ ಲಾಯಲ್ ಟು ದಿ ಚೇರ್. ಲಾಯಲ್ ಟು ದಿ ಪಾರ್ಟಿ. ಸಿಎಂ ಹೇಳಿದ್ದಾರಲ್ಲ ನೋ ಕ್ವೆಶ್ಚನ್, ನೋ ಡಿಸ್ಕಶನ್, ಡಿಬೆಟ್ನಲ್ಲಿ ಅದಕ್ಕೆಲ್ಲಾ ಉತ್ತರ ಕೊಟ್ಟಿದ್ದೇನೆ ಎಂದು ಮುಗುಳ್ನಕ್ಕರು.
ನಾಳೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶಕ್ಕೆ ಸ್ವಾಭಿಮಾನಿ ಒಕ್ಕೂಟದಿಂದ ಹೆಚ್ಚು ಜನ ಬರ್ತಾರೆ ಎಂಬ ಸಿಎಂ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಬರಲಿ ಸಾಕಷ್ಟು ಜನ ನಾಳೆಯ ಸಮಾವೇಶಕ್ಕೆ ಬರ್ತಾರೆ. ಬರುವ ನಿರೀಕ್ಷೆ ಇದೆ. ಎಲ್ಲ ವರ್ಗದ ಜನರ ಬೆಂಬಲದಿಂದಲೇ ನಮ್ಮ ಸರ್ಕಾರ ಬಂದಿದ್ದು. ನಾವು ಎಲ್ಲರಿಗೂ ಆಹ್ವಾನ ಕೊಡ್ತಿದ್ದೇವೆ. ನಾಳೆಯ ಸಮಾವೇಶಕ್ಕೆ ಕಾಂಗ್ರೆಸ್ ಪಕ್ಷ ಮುಂದಾಳತ್ವ ವಹಿಸುತ್ತಿದೆ ಎಂದು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಲೋಕಾಯುಕ್ತಕ್ಕೆ ಇ.ಡಿ. ಪತ್ರ ಬರೆದ ವಿಚಾರವಾಗಿ ಮಾತನಾಡಿ, ಯಾವುದೇ ವಿಚಾರಣೆ ಗುಪ್ತವಾಗಿ ನಡೆಯುವಂಥದ್ದು. ಏನಾದ್ರೂ ಇದ್ದರೆ ಕೋರ್ಟ್ಗೆ ಸಲ್ಲಿಸಬೇಕು. ಕೋರ್ಟ್ಗೆ ಸಲ್ಲಿಸದೆ ಮಾಧ್ಯಮಕ್ಕೆ ಬಿಡುಗಡೆ ಮಾಡ್ತೀವಿ ಅಂದರೆ ಹೇಗೆ?. ಎಷ್ಟು ಡಿಪ್ರೆಷನ್, ಡಿಸ್ಟರ್ಬ್ ಆಗಿದ್ದಾರೆ ಅಂತ ಇದರಲ್ಲೇ ಅರ್ಥ ಆಗುತ್ತೆ. ಏನೂ ಇಲ್ಲ ಅನ್ನೋದು ಅರ್ಥ ಆಗ್ತಿದೆ. ಆದರೂ ಚಿಂತೆ ಇಲ್ಲ. ನಮ್ಮ ಹೋರಾಟ ಮುಂದುವರೆಯುತ್ತದೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಹೋರಾಟ ಮಾಡುತ್ತೇವೆ ಎಂದು ಪರೋಕ್ಷವಾಗಿ ಇ.ಡಿ. ವಿರುದ್ಧ ವಾಗ್ದಾಳಿ ನಡೆಸಿದರು.