ಗಂಗಾವತಿ: ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಕುಟುಂಬದ ಬೆನ್ನಿಗೆ ನಿಲ್ಲಬೇಕಾದ ಶಾಸಕ ಬಸವರಾಜ ದಢೇಸ್ಗೂರು ಪ್ರಭಾವಿಗಳ ಬೆಂಬಲಕ್ಕೆ ನಿಂತಿದ್ದಾರೆ ಎಂದು ಕಾರಟಗಿ ತಾಲೂಕಿನ ಮುಸ್ಟೂರು ಗ್ರಾಮದ ಸಂತ್ರಸ್ತ ಕುಟುಂಬ ಅಳಲು ತೋಡಿಕೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಟರಾಜ್, ಚನ್ನಬಸವ ಹಾಗೂ ಸುಬ್ರಹ್ಮಣ್ಯ ಪ್ರಕರಣದ ಬಗ್ಗೆ ವಿವರಣೆ ನೀಡಿದರು. ಈ ಪ್ರಕರಣದಲ್ಲಿ ನೈತಿಕ ಬೆಂಬಲ ನೀಡಬೇಕಿದ್ದ ಶಾಸಕರು, ಆರೋಪಿಗಳ ಪರವಹಿಸಿದ್ದಾರೆ. ಇದನ್ನು ಖಂಡಿಸಿ ಜೂ.18ರಂದು ಶಾಸಕರ ಕಚೇರಿ ಮುಂದೆ ಧರಣಿ ನಡೆಸಲಾಗುವುದು.
ಕಳೆದ ವರ್ಷ 2019ರ ಡಿಸೆಂಬರ್ನಲ್ಲಿ ನಮ್ಮ ಕುಟುಂಬಕ್ಕೆ ಸೇರಿದ ಮಹಿಳೆಯೊಬ್ಬರ ಮೇಲೆ ಸಣ್ಣ ಹನುಮಂತಪ್ಪ ಕನಕರಾಜ ಎಂಬ ಆರೋಪಿ ಅತ್ಯಾಚಾರ ಮಾಡಿದ್ದಾರೆ. ಈ ಬಗ್ಗೆ ದೂರು ಪ್ರತಿದೂರು ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ದಾಖಲಿಸಲಾಗಿದೆ. ಅನ್ಯಾಯಕ್ಕೊಳಗಾದ ತಮ್ಮ ಕುಟುಂಬವನ್ನು ಸಂಪರ್ಕಿಸಿದ ಶಾಸಕ ಬಸವರಾಜ ಪೊಲೀಸರೊಂದಿಗೆ ಮಾತನಾಡಿ ಪ್ರಕರಣ ಖುಲಾಸೆ ಮಾಡಿಸುವ ಭರವಸೆ ನೀಡಿದ್ದರು. ಆದರೆ, ಈಗ ಆರೋಪಿಗಳ ಪರ ವಹಿಸಿದ್ದಾರೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡರು.