ಕೊಪ್ಪಳ: ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಸರ್ಕಾರ ಒಪ್ಪಿಕೊಂಡಿರುವಂತೆ ಎಲ್ಐಸಿ ಪಿಂಚಣಿ ಸೌಲಭ್ಯ ನೀಡದಿದ್ದರೆ ಅಕ್ಟೋಬರ್ 17ರಂದು ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷೆ ಲಕ್ಷ್ಮೀದೇವಿ ಸೋನಾರ್, ಸರ್ಕಾರದ ಕಡೆಯಿಂದ ನೂರು ರೂಪಾಯಿ ಹಾಗೂ ನೌಕರರಿಂದ ತಲಾ ನೂರು ರೂಪಾಯಿ ಸೇರಿ ಪಿಂಚಣಿ ಯೋಜನೆ ಸೌಲಭ್ಯ ಕಲ್ಪಿಸುವುದಾಗಿ ಸರ್ಕಾರ ಒಪ್ಪಿಕೊಂಡಿತ್ತು. ಆದರೀಗ ಮಾತು ತಪ್ಪಿ ಪ್ರಧಾನಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆಗೆ ಸೇರಿಸುವುದಾಗಿ ಆದೇಶಿಸಿದೆ. ಈ ಯೋಜನೆಯಲ್ಲಿ ವಯಸ್ಸಿನ ಮಿತಿ 18ರಿಂದ 40 ವರ್ಷ ಮಾತ್ರ. ಈಗಾಗಲೇ ಕೆಲವರು ನಿವೃತ್ತಿ ಅಂಚಿನಲ್ಲಿದ್ದಾರೆ. ಹೀಗಾಗಿ, ನೌಕರರಿಗೆ ಅನ್ಯಾಯವಾಗಲಿದೆ. ಕೂಡಲೇ ಆದೇಶವನ್ನು ರದ್ದುಪಡಿಸಿ ಮೊದಲು ನೀಡಿದ್ದ ಭರವಸೆಯಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
17 ವರ್ಷಗಳಿಂದ ಅಕ್ಷರ ದಾಸೋಹ ನೌಕರರಿಗೆ ವೇತನ, ಪಿಂಚಣಿ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತಿಲ್ಲ. ಇದರಿಂದಾಗಿ ಕುಟುಂಬ ನಿರ್ವಹಣೆ ಕಷ್ಟ ಸಾಧ್ಯವಾಗಿದೆ. ಬಿಸಿಯೂಟ ಕಾರ್ಯಕ್ರಮಕ್ಕೆ ಅಕ್ಷರ ದಾಸೋಹ ಸಿಬ್ಬಂದಿಯ ಶ್ರಮ ಸಾಕಷ್ಟಿದ್ದರೂ ದುಡಿಮೆಗೆ ತಕ್ಕ ವೇತನ ನೀಡದಿರುವುದು ಬೇಸರದ ಸಂಗತಿ ಎಂದು ಅಳಲು ತೋಡಿಕೊಂಡರು.
ರಾಜ್ಯದಲ್ಲಿ 1.18 ಲಕ್ಷ ಮಹಿಳೆಯರು ಅಕ್ಷರ ದಾಸೋಹ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನಮಗೆ ನೀಡುವ ಸೌಲಭ್ಯಗಳಿಗಾಗಿ ಸಾಕಷ್ಟು ಬಾರಿ ಹೋರಾಡಿದ್ದರೂ ಪ್ರಯೋಜನವಾಗಲಿಲ್ಲ. ನೌಕರರ ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮಾಡುತ್ತಲೇ ಇರುತ್ತೇವೆ. ಈ ನಿಟ್ಟಿನಲ್ಲಿ ಅಕ್ಟೋಬರ್ 17ರಂದು ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ. ಅಷ್ಟರೊಳಗೆ ಸರ್ಕಾರ ಎಚ್ಚೆತ್ತುಕೊಂಡು ನ್ಯಾಯ ಒದಗಿಸಿದರೆ ಪ್ರತಿಭಟನೆ ವಾಪಸ್ ಪಡೆಯುತ್ತೇವೆ. ಇಲ್ಲವಾದಲ್ಲಿ ಪ್ರತಿಭಟನೆ ಮುಂದುವರಿಸುತ್ತೇವೆ. ಆಗಲೂ ಆದೇಶ ರದ್ದುಪಡಿಸದಿದ್ದರೆ ಡಿಸೆಂಬರ್ನಲ್ಲಿ ಬಿಸಿಯೂಟ ಬಂದ್ ಮಾಡಿ ಹೋರಾಟಕ್ಕೆ ಇಳಿಯುತ್ತೇವೆ ಎಂದು ಎಚ್ಚರಿಸಿದರು.