ಕೊಪ್ಪಳ : ಕೊರೊನಾ ಹಿನ್ನೆಲೆ ಸದ್ಯಕ್ಕೆ ತರಗತಿಗಳು ಪ್ರಾರಂಭವಾಗುವುದಿಲ್ಲ. ಆದರೆ, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರನ್ನು ಭೇಟಿ ಮಾಡಿ ಅಭ್ಯಾಸಕ್ಕೆ ಸಂಬಂಧಿಸಿದಂತೆ ಮಾರ್ಗದರ್ಶನ ಪಡೆದುಕೊಂಡು ಹೋಗಬಹುದು ಎಂಬ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಅವರ ಸೂಚನೆಯಂತೆ ಜಿಲ್ಲೆಯಲ್ಲಿ ಈ ಬಗ್ಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸೋಂಕು ಹರಡುತ್ತಿರುವುದರಿಂದ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ಪಾಲಕರ ಒತ್ತಾಯಕ್ಕೆ ಮಣಿದ ಶಿಕ್ಷಣ ಸಚಿವರು, ತರಗತಿಗಳು ಪ್ರಾರಂಭವಾಗುವುದಿಲ್ಲ. ಆದರೆ, 9 ಹಾಗೂ 10ನೇ ತರಗತಿಯ ವಿದ್ಯಾರ್ಥಿಗಳು ಶಾಲೆಗೆ ಬಂದು ಶಿಕ್ಷಕರನ್ನು ಭೇಟಿ ಮಾಡಿ ಅಭ್ಯಾಸಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು ಎಂದಿದ್ದರು. ಹಾಗಾಗಿ, ಶಿಕ್ಷಣ ಸಚಿವರ ಅಣತಿಯಂತೆ ಜಿಲ್ಲೆಯಲ್ಲಿ ತಯಾರಿ ಮಾಡಿಕೊಳ್ಳಲಾಗುತ್ತಿದೆ.
9 ಮತ್ತು 10ನೇ ತರಗತಿಯ ಮಕ್ಕಳು ಶಾಲೆಗೆ ಬಂದು ಶಿಕ್ಷಕರನ್ನು ಭೇಟಿ ಮಾಡಿಕೊಂಡು ಹೋಗಬಹುದು. ಆದರೆ, ಈ ಬಗ್ಗೆ ಮಕ್ಕಳ ಪಾಲಕರು ಕಡ್ಡಾಯವಾಗಿ ಒಪ್ಪಿಗೆ ಪತ್ರ ನೀಡಬೇಕು. ಇಂದಿನಿಂದ ಎಸ್ಎಸ್ಎಲ್ಸಿ ಪೂರಕ ಪರೀಕ್ಷೆ ಆರಂಭವಾಗಿವೆ. ಈ ಸಂದರ್ಭದಲ್ಲಿ ಮಕ್ಕಳು ಬರುವುದಿಲ್ಲ.
ಅಲ್ಲದೆ, ಈಗಾಗಲೇ ವಿದ್ಯಾಗಮ ಮೂಲಕ ಮಕ್ಕಳಿಗೆ ಪಾಠ, ಕಿರುಪರೀಕ್ಷೆ ಸೇರಿ ಅಭ್ಯಾಸ ಮಾಡಿಸಲಾಗುತ್ತಿದೆ. ಹೀಗಾಗಿ, ಮಕ್ಕಳು ಶಾಲೆಗೆ ಬಂದೇ ಅಭ್ಯಾಸಕ್ಕೆ ಸಂಬಂಧಿಸಿದ ಸಮಸ್ಯೆ ಪರಿಹರಿಸಿಕೊಳ್ಳಬೇಕೆಂದೇನಿಲ್ಲ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದೊಡ್ಡಬಸಪ್ಪ ನೀರಲಕೇರಿ.