ಗಂಗಾವತಿ: ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಅವನು ಉಗ್ರನೇ ಅವನನ್ನು ಸಮರ್ಥಿಸುವುದು, ಪರೋಕ್ಷವಾಗಿ ಬೆಂಬಲಿಸುವುದು, ರಾಜಕೀಯ ಮಾಡುವುದು ಹೇಯ ಕೃತ್ಯ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
ತಾಲ್ಲೂಕಿನ ಆನೆಗೊಂದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನ ಬಜಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ವಿಚಾರದಲ್ಲಿ ರಾಜಕೀಯ ಮಾಡ್ತಿರೋದು ಹೇಯ ಕೃತ್ಯ. ಅದು ಆದಿತ್ಯ ರಾವ್ ಇರಬಹುದು, ಅಬ್ದುಲ್ ಇರಬಹುದು ಇದರಲ್ಲಿ ರಾಜಕಾರಣ ಮಾಡಬಾರದು. ಇದನ್ನು ಯಾರೇ ಮಾಡಿದ್ರೂ ಅದು ತಪ್ಪು. ಅವರಿಗೆ ಕಾನೂನು ಶಿಕ್ಷೆಯಾಗಬೇಕು ಎಂದರು.
ಪೊಲೀಸ್ ಇಲಾಖೆ ವಿರುದ್ದ ಮಾಜಿ ಸಿಎಂ ಕುಮಾರಸ್ವಾಮಿ ಮಾತಾಡ್ತಿರೋದು ಬಹಳ ಅಸಹ್ಯ . ಸಿಎಂ ಬಗ್ಗೆ ಮಾಜಿ ಸಿಎಂ ಮಾತನಾಡೋ ರೀತಿ ಅವರಿಗೆ ಶೋಭೆ ತರಲ್ಲ ಎಂದು ವಾಗ್ದಾಳಿ ನಡೆಸಿದರು. ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡಿವೆ. ಬಿಜೆಪಿ ಸರ್ಕಾರ ಭಯೋತ್ಪಾದಕರನ್ನು ಹಿಡಿದು ಶಿಕ್ಷೆ ನೀಡುತ್ತಿದೆ ಎಂದು ಮುತಾಲಿಕ್ ಕೇಂದ್ರ ಸರ್ಕಾರಕ್ಕೆ ಮಾರ್ಕ್ಸ್ ನೀಡಿದರು.
ಮೋದಿ ಕೆಲಸಕ್ಕೆ ವಿರೋಧ ಮಾಡೋದು ವಿಪಕ್ಷಗಳ ನಿರ್ಲಜ್ಯ ಕೆಲಸ, ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡ್ತಿದೆ. ಹೋರಾಟಕ್ಕೆ ಮುಸ್ಲಿಂರನ್ನು ಎತ್ತಿ ಕಟ್ಟಿ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಮುತಾಲಿಕ್ ಆರೋಪಿಸಿದರು.