ಕೊಪ್ಪಳ: ಕೋವಿಡ್ ಹಿನ್ನೆಲೆ ಶಾಲೆ-ಕಾಲೇಜುಗಳು ಬಂದ್ ಆಗಿದ್ದು, ಶೈಕ್ಷಣಿಕ ವರ್ಷ ಆರಂಭವಾಗಿರುವುದರಿಂದ ಮಕ್ಕಳಿಗೆ ಆನ್ಲೈನ್ ತರಗತಿ ನಡೆಸಲು ಸರ್ಕಾರ ನಿರ್ಧರಿಸಿದೆ. ಆದರೆ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಮೊಬೈಲ್ ಕೊರತೆಯಿಂದಾಗಿ ಆನ್ಲೈನ್ ತರಗತಿಗಳಿಂದ ವಂಚಿತರಾಗುತ್ತಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ಆನ್ಲೈನ್ ಶಿಕ್ಷಣ ನೀಡಲು ಸರ್ಕಾರ ನಿರ್ಧರಿಸಿದೆ. ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಲ್ಲಿ ಬಹುತೇಕರು ಬಡವರ ಮಕ್ಕಳಿದ್ದು, ತಮ್ಮ ಮಕ್ಕಳಿಗೆ ಆನ್ಲೈನ್ ಮೂಲಕ ಶಿಕ್ಷಣ ಕೊಡಿಸಲು ಪಾಲಕರು ಪರದಾಡುತ್ತಿದ್ದಾರೆ.
ಕೂಲಿ ಮಾಡಿ ಜೀವನ ಸಾಗಿಸುವ ಮಕ್ಕಳ ಪಾಲಕರಿಗೆ ಮೊಬೈಲ್ ಕೊಡಿಸವಷ್ಟು ಶಕ್ತಿ ಇಲ್ಲ. ಕೆಲ ಪಾಲಕರು ಸೆಕೆಂಡ್ ಹ್ಯಾಂಡ್ ಮೊಬೈಲ್ ತಂದರೂ ಸಹ ಅದರ ಸಾಲ ತೀರಿಸುವ ಮುನ್ನವೇ ಅದು ಕೆಟ್ಟು ಹೋಗಿರುತ್ತದೆ. ಇನ್ನೂ ಕೆಲ ವಿದ್ಯಾರ್ಥಿಗಳ ಮನೆಗೆ ವಿದ್ಯುತ್ ಸಂಪರ್ಕವಿಲ್ಲ.
ಶಿಕ್ಷಣ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 6 ನೇ ತರಗತಿಯಿಂದ 10 ನೇ ತರಗತಿಯಲ್ಲಿ ಓದುತ್ತಿರುವ ಒಟ್ಟು 77,864 ವಿದ್ಯಾರ್ಥಿಗಳಿದ್ದಾರೆ. 6 ರಿಂದ 10 ನೇ ತರಗತಿಯಲ್ಲಿ ಓದುತ್ತಿರುವ 17,498 ಮಕ್ಕಳಿಗೆ ಆನ್ಲೈನ್ ಶಿಕ್ಷಣ ಪಡೆಯಲು ಬೇಕಾದ ಮೂಲಭೂತ ಸೌಲಭ್ಯಗಳೇ ಇಲ್ಲ. ಈ ಬೆನ್ನಲ್ಲೇ ಇದೀಗ ಸರ್ಕಾರ 1ನೇ ತರಗತಿಯಿಂದ 5 ನೇ ತರಗತಿಯವರೆಗೆ ಆನ್ಲೈನ್ ಶಿಕ್ಷಣ ನೀಡುವ ಕುರಿತಂತೆ ಶಿಕ್ಷಕರು ಸಮೀಕ್ಷೆ ನಡೆಸುತ್ತಿದ್ದಾರೆ.
ನಾವು ಕೂಲಿ ಮಾಡಿಕೊಂಡು ಬದುಕುವವರು. ನಮ್ಮ ಮಕ್ಕಳಿಗೆ ಆನ್ಲೈನ್ ಶಿಕ್ಷಣದ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸುವುದು ಕಷ್ಟ. ನಮ್ಮಂತಹ ಬಡವರು ಮೊಬೈಲ್, ಮೊಬೈಲ್ಗೆ ಡೆಟಾ, ಟಿವಿ, ಟಿವಿಗೆ ಕರೆನ್ಸಿ ಹಾಕಿಸಲು ಹೇಗೆ ಸಾಧ್ಯ?, ದುಡಿದು ಹೊಟ್ಟೆ ತುಂಬಿಕೊಳ್ಳುವುದೇ ಈಗ ಕಷ್ಟವಾಗಿದೆ. ಪರಿಸ್ಥಿತಿ ಹೀಗಿರುವಾಗ ಮೊಬೈಲ್, ಟಿವಿ ತಗೆದುಕೊಳ್ಳೋಕೆ ಆಗುತ್ತಾ?, ನಮ್ಮಂತಹ ಬಡವರ ಮಕ್ಕಳ ಶಿಕ್ಷಣದ ಗತಿ ಏನಾಗುತ್ತದೆಯೋ ಏನೋ ಎಂದು ಕೆಲ ಪಾಲಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.