ಕೊಪ್ಪಳ: ಕಳಪೆ ಗುಣಮಟ್ಟದ ಗೊಬ್ಬರ ನೀಡಿದ್ದರಿಂದ ಆಕ್ರೋಶಿತಗೊಂಡ ರೈತ ಸಂಘದ ಕಾರ್ಯಕರ್ತರು ಗೊಬ್ಬರವನ್ನು ಜಿಲ್ಲಾಡಳಿತ ಭವನದ ಮುಂದೆ ಇರಿಸಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಮುಂದೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಗೊಬ್ಬರದ ಕಳಪೆ ಗುಣಮಟ್ಟವನ್ನು ತೋರಿಸಿದರು. ಅಲ್ಲದೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬೂದಗುಂಪ ಗ್ರಾಮದ ಭಿಮನಗೌಡ ಪಾಟೀಲ್ ಎಂಬುವವರು ಕೊಪ್ಪಳ ನಗರದಲ್ಲಿನ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದಲ್ಲಿ ಪೆರಿಗ್ರಿನ್ ಹೆಸರಿನ 15 ಚೀಲ ಸೆವಂಟೀನ್ ಆಲ್ (17:17:17) ಗೊಬ್ಬರವನ್ನು ಇದೇ ಸೆಪ್ಟಂಬರ್ 10 ರಂದು ಖರೀದಿಸಿದ್ದರು. ಆದರೆ ಗೊಬ್ಬರ ಕಳಪೆಯಾಗಿರುವುದನ್ನು ಪತ್ತೆ ಹಚ್ಚಿದ ಭೀಮನಗೌಡ ಅವರ ಮಗ ಕೆಂಚನಗೌಡ ಅವರು ಇಂದು ರೈತ ಸಂಘದ ಕಾರ್ಯಕರ್ತರೊಂದಿಗೆ ಗೊಬ್ಬರದ ಚೀಲಗಳನ್ನು ಜಿಲ್ಲಾಡಳಿತ ಭವನದ ಮುಂದೆ ತಂದಿರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ತನಿಖೆಯಾಗಬೇಕು ಎಂದು ರೈತ ಕೆಂಚನಗೌಡ ಪಾಟೀಲ್ ಆಗ್ರಹಿಸಿದರು. ಇನ್ನು ಕಳಪೆ ಗುಣಮಟ್ಟದ ಬೀಜ, ಗೊಬ್ಬರ ನೀಡುವವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಅಲ್ಲದೆ ಗೊಬ್ಬರ ಖರೀದಿಸಿರುವ ಎಲ್ಲಾ ರೈತರಿಗೆ ಪರಿಹಾರ ನೀಡಬೇಕು ಎಂದು ರೈತ ಸಂಘದ ಮುಖಂಡ ನಜೀರಸಾಬ ಮೂಲಿಮನಿ ಒತ್ತಾಯಿಸಿದರು.