ಗಂಗಾವತಿ: ಬಡ ಕುಟುಂಬಕ್ಕೆ ಸೇರಿದ ಹನ್ನೊಂದು ತಿಂಗಳ ಮಗು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೂ ಪರದಾಡುತ್ತಿರುವ ಘಟನೆ ಹಿನ್ನೆಲೆ ವಿವಿಧ ಇಲಾಖೆಯ ಅಧಿಕಾರಿಗಳು ಮೆನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದ 31ನೇ ವಾರ್ಡ್ನ ಬುಡುಗ ಜಂಗಮ ಸಮಾಜಕ್ಕೆ ಸೇರಿದ ಮರಿಯಮ್ಮ ಹಾಗೂ ದುರ್ಗೇಶ ಎಂಬ ಪೋಷಕರಿಗೆ ಸೇರಿದ ದೀಪಿಕಾ ಎಂಬ ಹೆಣ್ಣುಮಗು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದೆ. ತಮ್ಮ ಕರುಳಕುಡಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ತಂದೆ ತಾಯಿ ತೀವ್ರ ಸ್ವರೂಪದ ಪರದಾಟ ನಡೆಸುತ್ತಿದ್ದರು. ಪೋಷಕರ ಬಳಿ ಚಿಕಿತ್ಸೆಗೆ ಹಣ ಇಲ್ಲದಿರುವುದರ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ಮಗುವಿನ ಮನೆಗೆ ಭೇಟಿ ನೀಡಿದ್ದಾರೆ. ಈ ವೇಳೆ ವಿವಿಧ ಇಲಾಖೆಯಿಂದ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಅಧಿಕಾರಿಗಳು ಪಾಲಕರಿಗೆ ಭರವಸೆ ಕೊಟ್ಟರು.
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಡಿ. ಮೋಹನ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶರಣಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಗಂಗಪ್ಪ, ಆರ್ಬಿಎಸ್ ಯೋಜನೆಯ ವೈದ್ಯೆ ಡಾ. ಶ್ರೀದೇವಿ ಈ ವೇಳೆ ಉಪಸ್ಥಿತರಿದ್ದರು.