ಕೊಪ್ಪಳ: ಈ ಬಾರಿ ಕೊಪ್ಪಳ ಜಿಲ್ಲೆಯಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಅಪಾರ ಹಾನಿಯೂ ಸಂಭವಿಸಿದೆ. ಅಧಿಕಾರಿಗಳು, ಜನಪ್ರತಿನಿಧಿಗಳು ಮಳೆ ಹಾನಿ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಪರಿಹಾರ ಒದಗಿಸುವ ಭರವಸೆ ಕೊಟ್ಟರು.
ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿಯ ಹಿರೇಹಳ್ಳ ಜಲಾಶಯ ಒಂದೇ ದಿನದಲ್ಲಿ ಭರ್ತಿಯಾಗಿದ್ದು ಶುಕ್ರವಾರ ನಾಲ್ಕು ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರು ಹೊರಬಿಡಲಾಗಿದೆ. ಹಿರೇಹಳ್ಳದುದ್ದಕ್ಕೂ ಅಲ್ಲಲ್ಲಿ ನಿರ್ಮಿಸಲಾಗಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ತುಂಬಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ. ಎರಡು ದಂಡೆಯಲ್ಲಿರುವ ಜಮೀನಿನ ಫಲವತ್ತಾದ ಮೇಲ್ಮಣ್ಣು ಕೊಚ್ಚಿಹೋಗಿದೆ. ಕೆಲವೆಡೆ ಎರಡೂ ದಂಡೆಯ ಭೂಮಿ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಹಿರೇಹಳ್ಳದ ಸಮೀಪ ನೀರಿನಿಂದಾಗಿರುವ ಹಾನಿಯ ಬಗ್ಗೆ ಸಮೀಕ್ಷೆ ನಡೆಯುತ್ತಿದೆ.
ಸ್ಥಳಕ್ಕೆ ಕೊಪ್ಪಳ ಶಾಸಕ ಕೆ.ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ, 'ನಾನೇ ಈ ಕುರಿತು ರೈತರಿಂದ ನೇರವಾಗಿ ಮಾಹಿತಿ ಪಡೆಯುತ್ತೇನೆ. ಸರ್ಕಾರದ ಮೇಲೆ ಒತ್ತಡ ಹಾಕಿ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ' ಎಂದರು.
ಇದನ್ನೂ ಓದಿ: ಮಳೆಯಿಂದ ಮೃತಪಟ್ಟ ರೈತನ ಮನೆಗೆ ಸಚಿವ ಆರಗ ಭೇಟಿ, ₹4 ಲಕ್ಷ ಪರಿಹಾರ ವಿತರಣೆ
ಕೊಪ್ಪಳ ತಾಲೂಕಿನ ಮಂಗಳಾಪೂರ, ಕೋಳುರು, ಚಿಕ್ಕಸಿಂಧೋಗಿ ಗ್ರಾಮದ ಮಳೆ ಹಾನಿ ಪ್ರದೇಶಕ್ಕೆ ಸಂಸದ ಸಂಗಣ್ಣ ಕರಡಿ ಟ್ರ್ಯಾಕ್ಟರ್ನಲ್ಲಿ ತೆರಳಿ ರೈತರೊಂದಿಗೆ ಚರ್ಚಿಸಿದರು. ಅಪಾರ ಪ್ರಮಾಣದ ಬೆಳೆ ನಾಶವಾಗಿರುವ ಕುರಿತು ರೈತರೊಂದಿಗೆ ಮಾತನಾಡಿ ಮಾಹಿತಿ ಸಂಗ್ರಹಿಸಿ, ಪರಿಹಾರ ಕೊಡಿಸುವುದಾಗಿ ತಿಳಿಸಿದರು.