ಗಂಗಾವತಿ : ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ನಿಯಮ ಉಲ್ಲಂಘಿಸಿ ಕೋಣಗಳನ್ನು ವಧೆ ಮಾಡುತ್ತಿದ್ದ ಅಕ್ರಮ ಕಸಾಯಿಖಾನೆಯ ಮೇಲೆ ಪೊಲೀಸರು ದಾಳಿ ಮಾಡಿ 20 ಕೋಣಗಳನ್ನು ರಕ್ಷಣೆ ಮಾಡಿದ್ದಾರೆ.
ನಗರದ ಹೆಚ್ಆರ್ಎಸ್ ಕಾಲೋನಿಯ ಹುಮಾ ಶಾಲೆಯ ಮುಂಭಾಗದಲ್ಲಿರುವ ಈ ಕಸಾಯಿಖಾನೆಯಲ್ಲಿ ಅಕ್ರಮವಾಗಿ ಜಾನುವಾರುಗಳನ್ನ ವಧೆ ಮಾಡಲಾಗುತ್ತಿದೆ ಎಂಬ ಸುಳಿವಿನ ಮೇರೆಗೆ ಪೊಲೀಸರು ದಾಳಿ ಮಾಡಿದ್ದಾರೆ.
ದಾಳಿ ವೇಳೆ ಕತ್ತರಿಸಿ ಮಾರಾಟಕ್ಕಿಟ್ಟಿದ್ದ ಎರಡು ಕೋಣಗಳ ಮಾಂಸ ದೊರೆತಿದೆ. 20ಕ್ಕೂ ಹೆಚ್ಚು ಕೋಣಗಳನ್ನು ಪೊಲೀಸರು, ನಗರಸಭೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದಾರೆ.
ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಆರೋಪದ ಮೇರೆಗೆ ಹಾಗೂ ಗೋಹತ್ಯೆ ನಿಷೇಧ ಕಾಯ್ದೆ ಅನ್ವಯ ಹೆಚ್ಆರ್ಎಸ್ ಕಾಲೋನಿಯ ಭಾಷಾಸಾಬ ಮತ್ತು ರಫಿಕ್ ಎಂಬ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.