ಕೊಪ್ಪಳ: ಸಂಚಾರಿ ಪೊಲೀಸರ ಕೆಲಸದ ವೈಖರಿ ಒಂದಿಷ್ಟು ಬದಲಾಗಿದ್ದು, ಎಲ್ಲೆಲ್ಲೋ ಹೋಗಿ ಕುಳಿತು ಡ್ಯೂಟಿ ಮಾಡುತ್ತಿದ್ದ ಕೆಲ ಸಂಚಾರ ನಿಯಂತ್ರಣ ಪೊಲೀಸರಿಗೆ ಇಲಾಖೆ ಲಗಾಮು ಹಾಕಿದೆ.
ನಗರದ ಅಶೋಕ ಸರ್ಕಲ್, ಬಸ್ ನಿಲ್ದಾಣ ಹಾಗೂ ಬಸವೇಶ್ವರ ಸರ್ಕಲ್ನಲ್ಲಿ ಸಂಚಾರ ನಿಯಂತ್ರಿಸಲು ಜಿಲ್ಲಾ ಪೊಲೀಸ್ ಇಲಾಖೆ ಒಂದಿಷ್ಟು ಆಧುನಿಕ ಉಪಕರಣ ಒದಗಿಸಿದೆ. ಇದರಿಂದಾಗಿ ನಗರದ ಈ ಮೂರು ಪ್ರದೇಶಗಳಲ್ಲಿ ಸಂಚಾರ ಪೊಲೀಸರ ಕೆಲಸದ ವೈಖರಿ ಬದಲಾಗಿದೆ. ಸಂಚಾರ ಪೊಲೀಸರು ಮೈಕ್ ಹಿಡಿದು ಧ್ವನಿವರ್ಧಕದ ಮೂಲಕ ಸಂಚಾರ ನಿಯಂತ್ರಣ ಮಾಡುತ್ತಿದ್ದಾರೆ. ಈ ವ್ಯವಸ್ಥೆ ಜ.01ರಿಂದ ಆರಂಭಗೊಂಡಿದೆ.
ಓದಿ: ಮಾಜಿ ಸಂಸದರ ಮನೆ ಸೇರಿ ಹಲವೆಡೆ ಕಳ್ಳತನ ಮಾಡಿದ್ದ ನಾಲ್ವರ ಬಂಧನ
ಈ ವ್ಯವಸ್ಥೆ ಇಲ್ಲದ ಸಂದರ್ಭದಲ್ಲಿ ಕೆಲ ಸಂಚಾರ ಪೊಲೀಸರು ತಮ್ಮ ಡ್ಯೂಟಿ ಸ್ಥಳವನ್ನು ಬಿಟ್ಟು ಹೋಟೆಲ್ ಸೇರಿದಂತೆ ಬೇರೆ ಬೇರೆ ಕಡೆ ಕುಳಿತು ಕರ್ತವ್ಯ ಮಾಡುತ್ತಿದ್ದರು. ಬದಲಾದ ವ್ಯವಸ್ಥೆಯಿಂದಾಗಿ ಕರ್ತವ್ಯ ನಿರತ ಸಿಬ್ಬಂದಿ ಸರಿಯಾಗಿ ಕೆಲಸ ಮಾಡುವಂತಾಗಿದೆ. ಕುಳಿತಲ್ಲಿಯೇ ತಮ್ಮ ವ್ಯಾಪ್ತಿಯ ಸಂಚಾರ ನಿಯಂತ್ರಣದ ಜೊತೆಗೆ ಸಂಚಾರ ನಿಯಮ ಪಾಲಿಸಲು ಸಾರ್ವಜನಿಕರಿಗೆ ಅರಿವು ಮೂಡಿಸಲು ಅನುಕೂಲವಾಗಿದೆ ಎನ್ನಬಹುದು.