ಕುಷ್ಟಗಿ(ಕೊಪ್ಪಳ): ಕಾನ್ಸ್ಟೇಬಲ್ ಒಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಈ ನಡುವೆ ಕಾನ್ಸ್ಟೇಬಲ್ ಇನ್ನೊಬ್ಬ ಸೋಂಕಿತನ ಪಾಲಕರಿಗೆ ಧೈರ್ಯ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಹನುಮಸಾಗರದಲ್ಲಿ ಕೊರೊನಾ ಸೋಂಕಿತ ಪೊಲೀಸ್ ಕಾನ್ಸ್ಟೇಬಲ್ ಚಿಕಿತ್ಸೆಗಾಗಿ ಆ್ಯಂಬುಲೆನ್ಸ್ ಏರಿದ್ದಾರೆ. ಈ ವೇಳೆ ಈಗಾಗಲೇ ಆ್ಯಂಬುಲೆನ್ಸ್ನಲ್ಲಿ ಇದ್ದ ಇನ್ನೊಬ್ಬ ಸೋಂಕಿತನ ಪೋಷಕರ ಕಳವಳವನ್ನ ಗಮನಿಸಿದ ಪೊಲೀಸ್, ಆ ಪಾಲಕರಿಗೆ ಧೈರ್ಯ ತುಂಬಿದ್ದಾರೆ. ಸರ್ಕಾರ ಸೋಂಕಿತರಿಗಾಗಿ ಇಷ್ಟೆಲ್ಲ ಖರ್ಚು ಮಾಡುತ್ತಿದೆ. ತಮಗೂ ಸೋಂಕು ಇದೆ ಧೈರ್ಯ ಕಳೆದುಕೊಳ್ಳದಿರಿ ಮಾಸ್ಕ್ ಹಾಕಿ ಮನೆಯಲ್ಲಿ ಇರಿ ಎನ್ನುವ ಆತ್ಮಸ್ಥೈರ್ಯದ ಮಾತುಗಳನ್ನಾಡಿದ್ದಾರೆ. ಸಾರ್ವಜನಿಕರಲ್ಲಿ ಧೈರ್ಯ ತುಂಬುವುದರ ಜೊತೆಗೆ ಜನರಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿದ ವಿಡಿಯೋ ಈಗ ವೈರಲ್ ಆಗಿದೆ.
ಕೊರೊನಾ ವಾರಿಯರ್ಸ್ ಜನರ ಜೀವ ಉಳಿಸುವುದಕ್ಕಾಗಿಯೇ ಪಣ ತೊಟ್ಟಿದ್ದಾರೆ. ಅವರಿಗೆ ಸಮಸ್ಯೆಯಾದರೆ ನೀವೆಲ್ಲ ತೊಂದರೆ ಅನುಭವಿಸಬೇಕಾಗುತ್ತದೆ. ಮನೆಯಲ್ಲಿಯೇ ಇರಬೇಕು' ಎಂದು ಹೇಳುತ್ತಿರುವುದು ವಿಡಿಯೋದಲ್ಲಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಅವರನ್ನು ಕೋವಿಡ್ ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ತಂದಿದ್ದರು. ಈ ವೇಳೆ ಸುತ್ತಲಿನ ಪ್ರದೇಶ ವನ್ನು ಸೀಲ್‌ಡೌನ್ ಮಾಡಿದ್ದರೂ ಜನ ನಡೆದಾಡುತ್ತಿದ್ದನ್ನು ನೋಡಿದ ಅವರು, ಆ್ಯಂಬುಲೆನ್ಸ್ನಲ್ಲೇ ನಿಂತುಕೊಂಡು ಸುತ್ತಲಿನ ಜನರಲ್ಲಿ ಕೋವಿಡ್ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದರು.