ಗಂಗಾವತಿ : ಕಳೆದ ಎರಡು ವರ್ಷದಿಂದ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಸುರಿಯತ್ತಿರುವ ಆಲಿಕಲ್ಲು ಮಳೆಗೆ ರೈತರು ಬೆಳೆದ ಭತ್ತದ ಬೆಳೆ ಹಾನಿಯಾಗುತ್ತಿದೆ. ಹೀಗಾಗಿ, ಈ ಬಾರಿ ಮುಂಗಾರು ಮಳೆಯ ಸಂಭವನೀಯ ಹಾನಿ ತಪ್ಪಿಸಲು ಈಗಿನಿಂದಲೇ ನೀರಾವರಿ ಪ್ರದೇಶದಲ್ಲಿ ರೈತರನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಕನಕಗಿರಿ ಶಾಸಕ ಬಸವರಾಜ ದಢೇಸ್ಗೂರು ಹೇಳಿದರು.
ಈ ಬಗ್ಗೆ ‘ಈಟಿವಿ ಭಾರತ’ದೊಂದಿಗೆ ಮಾತನಾಡಿದ ಶಾಸಕರು, ಈಗಾಗಲೇ ತುಂಗಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನೀರಿನ ಸಂಗ್ರಹ ಪ್ರಮಾಣವೂ ಹೆಚ್ಚಳವಾಗುತ್ತಿದೆ ಎಂದರು.
ಈ ಹಿನ್ನೆಲೆ ಕೂಡಲೇ ತುಂಗಭದ್ರಾ ಎಡದಂಡೆ ಕಾಲುವೆಗೆ ತಕ್ಷಣದಿಂದ ಅಂದರೆ ಜುಲೈ 1ರಿಂದ ಒಂದು ಸಾವಿರ ಕ್ಯೂಸೆಕ್ ನೀರು ಬಿಡಲು ನಿರ್ಣಯ ಕೈಗೊಳ್ಳಲಾಗುತ್ತಿದೆ. ಇದರಿಂದ ಬೇಗ ಸಸಿಮಡಿ ಹಾಕಬಹುದು. ಬೇಗ ಭತ್ತ ನಾಟಿ ಮಾಡಲು ಸಹಾಯವಾಗುತ್ತದೆ ಎಂದು ಹೇಳಿದರು.
ಮಾರ್ಚ್ ಅಂತ್ಯದೊಳಗೆ ಎರಡು ಬೆಳೆ ತೆಗೆಯಬೇಕು. ಈ ಮೂಲಕ ಏಪ್ರಿಲ್, ಮೇ ತಿಂಗಳಲ್ಲಿನ ಸಂಭವನೀಯ ಮುಂಗಾರು ಮಳೆಯ ಹೊಡೆತದಿಂದ ರೈತರನ್ನು ಪಾರು ಮಾಡಬಹುದು. ಇದಕ್ಕಾಗಿ ಬುಧವಾರ ಕಾರಟಗಿಯಲ್ಲಿ ರೈತರ ಸಭೆ ಆಯೋಜಿಸಲಾಗಿದೆ ಎಂದರು.