ಗಂಗಾವತಿ (ಕೊಪ್ಪಳ): ಆಧಾರ್ ಕಾರ್ಡ್ನಲ್ಲಿ ತಿದ್ದುಪಡಿ ಹಾಗೂ ಬದಲಾವಣೆ ಮಾಡಿಸಿಕೊಳ್ಳಲು ಬಯಸುವ ಜನ ಇಲ್ಲಿನ ಆಧಾರ್ ಸೇವಾ ಕೇಂದ್ರದ ಮುಂದೆ ಬೆಳಗ್ಗೆ 5 ಗಂಟೆಯಿಂದಲೇ ಅನ್ನಾಹಾರ, ದೈನಿಕ ಕಾರ್ಯ ಬಿಟ್ಟು, ಹೆಚ್ಚಾಗಿ ಸಾಮಾಜಿಕ ಅಂತರವಿಲ್ಲದೆ ಸಾಲುಗಟ್ಟಿ ನಿಂತಿದ್ದ ಘಟನೆ ನಡೆದಿದೆ.
ಇಡಿ ನಗರದ 35 ವಾರ್ಡ್ನ ಪೈಕಿ ಇಲ್ಲಿನ ನೀಲಕಂಠೇಶ್ವರ ವೃತ್ತದಲ್ಲಿರುವ ಪ್ರಗತಿ ಕೃಷ್ಣ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಕೇಂದ್ರಕ್ಕೆ ಮಾತ್ರ ಆಧಾರ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿರುವುದು ಜನರ ಪರದಾಟಕ್ಕೆ ಕಾರಣವಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಜನ ಈಗಾಗಲೇ ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಕೂಡ ಜನರಿಗೆ ಪರಿಹಾರ ಧನ ಘೋಷಣೆ ಮಾಡಿದೆ. ಆದರೆ ಈ ಪರಿಹಾರ ಪಡೆಯಬೇಕಾದರೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದ್ದು, ಇದಕ್ಕಾಗಿ ಜನ ಸಾಲುಗಟ್ಟಿ ನಿಂತಿದ್ದು ಕಂಡುಬಂದಿದೆ. ಅಲ್ಲದೆ ಈ ಸಾಲು ನಿತ್ಯವೂ ಮುಂದುವರಿದಿದೆ.
ಈ ಬಗ್ಗೆ ಜಿಲ್ಲಾಧಿಕಾರಿ ಕೂಡಲೆ ಗಮನಹರಿಸಿ ನಗರ ಮತ್ತು ಗ್ರಾಮೀಣ ಪ್ರದೇಶಕ್ಕೆ ಆಧಾರ್ ತಿದ್ದುಪಡಿ ಕೇಂದ್ರದ ಸವಲತ್ತು ಒದಗಿಸಬೇಕು ಎಂದು ಕರವೇ ಸಂಘಟನೆಯ ಪಂಪಣ್ಣ ನಾಯಕ್ ಆಗ್ರಹಿಸಿದ್ದಾರೆ.