ಗಂಗಾವತಿ: ಇಲ್ಲಿನ ಉಪವಿಭಾಗ ಸರ್ಕಾರಿ ಆಸ್ಪತ್ರೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿ ಸಿಗುವ ಸೌಲಭ್ಯ, ಗುಣಮಟ್ಟದ ಚಿಕಿತ್ಸೆಯಿಂದಲೇ ಈ ಆಸ್ಪತ್ರೆ ದೊಡ್ಡ ಹೆಸರು ಮಾಡಿದೆ. ಆದರೆ ಇಂದು ರೋಗಿಗಳು, ಜನ ಇದ್ದಕ್ಕಿದ್ದಂತೆ ಆಸ್ಪತ್ರೆಯಿಂದ ದಿಕ್ಕಾಪಾಲಾಗಿ ಓಡಿದ್ರು.
ಹೌದು, ಯಾಕಂದ್ರೆ ಆಸ್ಪತ್ರೆಯಲ್ಲಿ ಅಳವಡಿಸಲಾಗಿದ್ದ ಜನರೇಟರ್ ಶಾರ್ಟ್ ಸರ್ಕ್ಯೂಟ್ನಿಂದ ಸುಟ್ಟು ಹೋಗಿದ್ದು, ದೊಡ್ಡ ಪ್ರಮಾಣದ ಸದ್ದು ಕೇಳಿ ಬಂದಿದೆ. ಇದರಿಂದ ಕಂಗಲಾದ ಜನ, ಮಕ್ಕಳು ದಿಕ್ಕಾಪಾಲಾಗಿ ಹೊರಗಡೆ ಓಡಿಬಂದಿದ್ದಾರೆ.
ಜನರೇಟರ್ ಶಾರ್ಟ್ ಸರ್ಕ್ಯೂಟ್ ಆಗಿದೆ ಎಂದು ತಿಳಿದ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಘಟನೆಯಿಂದಾಗಿ ಯಾರಿಗೂ ಯಾವುದೇ ಸಮಸ್ಯೆಯಾಗಿಲ್ಲ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದರು.
ಪರ್ಯಾಯ ವ್ಯವ್ಯಸ್ಥೆ ಆಗುವವರೆಗೂ ಎರಡ್ಮೂರು ದಿನ ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಮುಂದೂಡಲಾಗಿದೆ. ಜಿಲ್ಲಾಧಿಕಾರಿ ಬಳಿ ಅನುದಾನಕ್ಕೆ ಬೇಡಿಕೆಯಿಟ್ಟು ತಕ್ಷಣ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಈಶ್ವರ ಸವುಡಿ ತಿಳಿಸಿದ್ದಾರೆ.