ಕುಷ್ಟಗಿ(ಕೊಪ್ಪಳ): ಸ್ಥಳೀಯರ ವಿರೋಧದ ನಡುವೆಯೂ ಕುಷ್ಟಗಿ ತಾಲೂಕಿನಲ್ಲಿ ಕೋವಿಡ್ ಆಸ್ಪತ್ರೆಗೆ ಪ್ರತ್ಯೇಕ ದ್ವಾರ ಬಾಗಿಲು ನಿರ್ಮಿಸಲು, ಕಾಂಪೌಂಡ್ ಗೋಡೆ ತೆರವುಗೊಳಿಸಲಾಯಿತು.
ತಾಲೂಕು ಸರ್ಕಾರಿ ಆಸ್ಪತ್ರೆಯ ಅರ್ಧ ಭಾಗವನ್ನು ಕೋವಿಡ್ ಆಸ್ಪತ್ರೆಗೆ ನೀಡಲು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಆಸ್ಪತ್ರೆಗೆ ಪ್ರತ್ಯೇಕ ದ್ವಾರದ ಹಿನ್ನೆಲೆ ಪಶ್ವಿಮ ದಿಕ್ಕಿನಲ್ಲಿರುವ ಕಾಂಪೌಂಡ್ ಗೋಡೆ ತೆರವುಗೊಳಿಸಲು ಮುಂದಾದಾಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿ, ತಾಲೂಕು ವೈದ್ಯಾಧಿಕಾರಿಗೆ ಕಳೆದ ಭಾನುವಾರ ಮನವಿ ಸಲ್ಲಿಸಿದ್ದರು.
ಮಂಗಳವಾರ ಆವರಣಗೋಡೆ ತೆರವುಗೊಳಿಸಲು ಮುಂದಾದಾಗಲೂ ವಿರೋಧ ವ್ಯಕ್ತವಾಯಿತು. ಸ್ಥಳೀಯರ ವಿರೋಧ ಲೆಕ್ಕಿಸದೇ ಜೆಸಿಬಿಯಿಂದ ಆವರಣ ಗೋಡೆ ತೆರವುಗೊಳಿಸಿದರು. ಈ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಅಬ್ದುಲ್ ನಯೀಮ್ ಅವರು, ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರನ್ನು ಕರೆ ಮೂಲಕ ಸಂಪರ್ಕಿಸಿ, ಕೋವಿಡ್ ಆಸ್ಪತ್ರೆ ಊರಿನೊಳಗೆ ಬೇಡ, ಹೊರವಲಯದಲ್ಲಿ ಎಲ್ಲಿಯಾದರೂ ಸ್ಥಾಪಿಸಲು ಆಗ್ರಹಿಸಿದರು.
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು, ಕೋವಿಡ್ ಆಸ್ಪತ್ರೆಗೆ ನನ್ನ ವಿರೋಧವು ಇದೆ ಆದರೆ ಸರ್ಕಾರದ ನಿರ್ದೇಶನವಿದ್ದು ಆಸ್ಪತ್ರೆಯಲ್ಲಿ ಅರ್ಧಭಾಗ ಕೋವಿಡ್ ಆಸ್ಪತ್ರೆ ಆರಂಭಿಸಲು ಸೂಚಿಸಿದೆ. ಜಿಲ್ಲಾಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸುವೆ, ತಾವೂ (ಸ್ಥಳೀಯರು) ಸಾರ್ವಜನಿಕರ ಪರವಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸೂಚಿಸಿದ್ದಾರೆ ಎಂದು ಅಬ್ದುಲ್ ನಯೀಮ್ ತಿಳಿಸಿದರು.