ಗಂಗಾವತಿ : ಕನಕಗಿರಿ, ಗಂಗಾವತಿ ಹಾಗೂ ಕಾರಟಗಿ ತಾಲೂಕಿನಲ್ಲಿ ವ್ಯಾಪಕವಾಗಿರುವ ಅಕ್ರಮ ಮರಳು ಹಾಗೂ ಕಲ್ಲು ಗಣಿಗಾರಿಕೆ ತಡೆಯಲು ಇದೀಗ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಕೃಷಿ ಅಥವಾ ಪಟ್ಟಾ ಜಮೀನಿನಲ್ಲಿ ಅಕ್ರಮ ಮರಳು, ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಿದ್ದಲ್ಲಿ ಅಂತಹ ಜಮೀನಿನ ಪಹಣಿ ಬ್ಲಾಕ್ ಮಾಡುವುದು ಹಾಗೂ ಭೂ ಸುಧರಣಾ ಕಾಯ್ದೆ ಅನ್ವಯ ಕೃಷಿ ಭೂಮಿಯನ್ನು ಸರ್ಕಾರಕ್ಕೆ ವಾಪಸ್ ಪಡೆದುಕೊಳ್ಳುವ ಕ್ರಮಕ್ಕೆ ಮುಂದಾಗಿದೆ.
ಈ ಬಗ್ಗೆ ಕೊಪ್ಪಳದ ಸಹಾಯಕ ಆಯುಕ್ತ ಹಾಗೂ ಸ್ಯಾಂಡ್ ಮಾನಿಟರಿಂಗ್ ಕಮಿಟಿ ತಂಡದ ಮುಖ್ಯಸ್ಥ ನಾರಾಯಣ ಕನಕರೆಡ್ಡಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಕ್ರಮ ಮರಳು, ಕಲ್ಲು ಗಣಿಗಾರಿಕೆ ಕಂಡು ಬಂದಲ್ಲಿ ಸಂಬಂಧಿತ ಇಲಾಖೆಯ ಅಧಿಕಾರಿಗಳನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮದ ಮಧ್ಯೆಯೂ ಹಿರೇಜಂತಕಲ್, ಹೆಬ್ಬಾಳ, ನಂದಿಹಳ್ಳಿ, ಕುಂಟೋಜಿ ಭಾಗದಲ್ಲಿ ಅಪಾರ ಪ್ರಮಾಣದ ಅಕ್ರಮ ಮರಳು ಗಣಿಗಾರಿಕೆ ನಡೆಯುತ್ತಿದೆ. ಮರಳು ದಂಧೆಕೋರರು ಅಧಿಕಾರಿಗಳಿಗೆ ತಲೆನೋವಾಗಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಯಲ್ಲಿ ಪೊಲೀಸ್ ಇಲಾಖೆಯ ಅಧಿಕಾರಿಗಳು ನೇರ ಶಾಮೀಲಾಗಿದ್ದಾರೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಈಗಾಗಲೇ ಹಲವು ಬಾರಿ ಗಂಭೀರ ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಜಿಲ್ಲಾಡಳಿತ ಈ ರೀತಿಯ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.