ಕೊಪ್ಪಳ: ಸರಿಯಾದ ಮಾರುಕಟ್ಟೆ ಬೆಲೆ ಸಿಗದ ಕಾರಣ ಜಿಲ್ಲೆಯಲ್ಲಿ ಭತ್ತದ ಬೆಳೆಯನ್ನು ಸಂಗ್ರಹಿಸಿಡುವ ರೈತರ ಸಂಖ್ಯೆ ಗಣನೀಯವಾಗಿ ತಗ್ಗಿದೆ.
ಜಿಲ್ಲೆಯಲ್ಲಿ ಒಟ್ಟು ಸುಮಾರು 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಬಾರಿ ಭತ್ತ ಬೆಳೆಯಲಾಗಿದೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ವರ್ಷಕ್ಕೆ ಎರಡು ಬೆಳೆಯನ್ನು ಬೆಳೆಯಲಾಗುತ್ತಿದ್ದು, ಈ ವರ್ಷದ ಮೊದಲ ಬೆಳೆಯನ್ನು ಈಗಾಗಲೇ ರೈತರು ಕಟಾವು ಮಾಡುತ್ತಿದ್ದಾರೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಭತ್ತದ ಬೆಳೆಯೇ ಪ್ರಧಾನವಾಗಿದೆ. ಆದರೀಗ ಬೆಳೆ ಬಂದಾಗ ಬೆಲೆ ಕುಸಿತವಾಗುವುದರಿಂದ ಸಹಜವಾಗಿಯೇ ರೈತರು ಚಿಂತಾಕ್ರಾಂತರಾಗಿದ್ದಾರೆ.
ಜಿಲ್ಲೆಯಲ್ಲಿ ಭತ್ತ ಬೆಳೆಯುವ ಶೇಕಡಾ 90 ರಷ್ಟು ರೈತರು ಭತ್ತವನ್ನು ಸಂಗ್ರಹಿಸಿಟ್ಟುಕೊಳ್ಳುವುದಿಲ್ಲ. ಒಂದಿಷ್ಟು ಆರ್ಥಿಕವಾಗಿ ಸದೃಢವಾಗಿರುವ ರೈತರು ತಮ್ಮ ಸ್ವಂತ ಗೋದಾಮಿನಲ್ಲಿಯೋ ಅಥವಾ ಖಾಸಗಿ ಗೋದಾಮಿನಲ್ಲಿಯೋ ಭತ್ತವನ್ನು ಸಂಗ್ರಹಿಸುತ್ತಾರೆ. ಭತ್ತವನ್ನು ಅಕ್ಕಿ ಗಿರಣಿಗಳ ಮಾಲೀಕರು, ವ್ಯಾಪಾರಸ್ಥರು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಭತ್ತ ಬೆಳೆದ ಶೇಕಡಾ 90 ರಷ್ಟು ರೈತರು ಬೆಳೆ ಕಟಾವು ಆಗುತ್ತಿದ್ದಂತೆ ಮಾರಾಟ ಮಾಡುತ್ತಾರೆ.
ಕಾರಣವೆಂದರೆ, ಮೊದಲನೆಯದಾಗಿ ಭತ್ತ ಬೆಳೆಯಲು ಮಾಡಿದ ಸಾಲ ತೀರಿಸಲು ಮತ್ತು ಕುಟುಂಬದ ನಿರ್ವಹಣೆಗೆ ಹಣಕಾಸಿನ ಅಗತ್ಯತೆ ಹಿನ್ನೆಲೆಯಲ್ಲಿ ಭತ್ತವನ್ನು ಕಟಾವು ಮಾಡಿದ ಕೂಡಲೇ ಮಾರಾಟ ಮಾಡುತ್ತಾರೆ. ಮತ್ತೊಂದು ಕಾರಣ, ಜಿಲ್ಲೆಯಲ್ಲಿ ಶೇಕಡಾ 90 ರಷ್ಟು ರೈತರು ಗೋದಾಮನ್ನು ಹೊಂದಿಲ್ಲ. ಗೋದಾಮು ನಿರ್ಮಾಣ ಮಾಡಿಕೊಳ್ಳುವುದು ಮತ್ತಷ್ಟು ಆರ್ಥಿಕ ಹೊರೆ. ಅಲ್ಲದೆ ಎರಡನೇ ಬೆಳೆಗೆ ಬೇಕಾದ ಸಿದ್ದತೆಗಳಿಗೆ ಹಣಕಾಸಿನ ಅಗತ್ಯತೆ ಇದೆ. ಹೀಗಾಗಿ, ಭತ್ತ ಕಟಾವು ಮಾಡಿದ ಕೂಡಲೇ ರೈತರು ಮಾರಾಟ ಮಾಡುತ್ತಿದ್ದಾರೆ.
ಕಡಿಮೆ ಬೆಲೆ ಇದ್ದರೂ ಸಹ ಅನಿವಾರ್ಯತೆಯಿಂದ ಇರುವ ದರಕ್ಕೆ ರೈತರು ಮಾರಾಟ ಮಾಡುತ್ತಾರೆ ಎನ್ನುತ್ತಾರೆ ಭತ್ತ ಬೆಳೆದ ರೈತರಾದ ಹೊಸಳ್ಳಿಯ ನಾಗರಾಜ ಹಾಗೂ ಅಗಳಕೇರಾ ಗ್ರಾಮದ ರೈತ ಬಸವರಾಜ ಕರ್ಕಿಹಳ್ಳಿ.