ಗಂಗಾವತಿ: ಮಳೆಯ ಅವಾಂತರ ಒಂದೆರಡಲ್ಲ. ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ ಎಂಬ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆ ಈಗ ರೈತ ಸಮುದಾಯವನ್ನು ಚಿಂತೆಗೀಡು ಮಾಡಿದೆ.
ಹೌದು, ಈಗಾಗಲೆ ಗಂಗಾವತಿ ತಾಲೂಕಿನಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಸೋನಾ ಮಸೂರಿ ಭತ್ತದ ಬೆಳೆಗೆ ಈಗ ಮಳೆಯ ಕಾಟ ಆರಂಭವಾಗಿದೆ. ಮಳೆಯಿಂದಾಗಿ ಭತ್ತದ ಪೈರು ನೆಲಕ್ಕೊರಗುತ್ತಿದೆ. ನೆಲದಲ್ಲಿ ಬಿದ್ದ ಭತ್ತ ನೀರಿನಲ್ಲಿ ನೆನೆದು ಹಾಳಾಗುತ್ತಿದೆ.
ಹೀಗಾಗಿ ಭತ್ತದ ಕಾಳು ನೀರು, ಕೆಸರಲ್ಲಿ ಬಿದ್ದು ರೈತರಿಗೆ ಹಾನಿಯಾಗುತ್ತಿದೆ. ಇನ್ನೆರಡು ವಾರದಲ್ಲಿ ಭತ್ತದ ಕಟಾವು ಆರಂಭವಾಗಲಿದ್ದು, ಸತತ ಮಳೆ ಹೀಗೆ ಸುರಿದರೆ ಬಹುತೇಕ ಭತ್ತ ನಾಶವಾಗುವುದರಲ್ಲಿ ಅನುಮಾನವಿಲ್ಲ. ಇದರಿಂದ ಸಂಕಷ್ಟದ ಸ್ಥಿತಿಗೆ ರೈತ ಸಿಲುಕಿದ್ದಾನೆ.