ನವದೆಹಲಿ: ಗಲ್ಫ್ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಸುಮಾರು 60 ಭಾರತೀಯ ಪ್ರಯಾಣಿಕರನ್ನೊಳಗೊಂಡ ಪ್ಲೈಟ್ ಮಾರ್ಗ ಬದಲಾಯಿಸಿ ಭಾನುವಾರ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಿದೆ. ಈ ವೇಳೆ ಪ್ರಯಾಣಿಕರು ಪರ್ಯಾಯ ಮಾರ್ಗ ಕಾಣದೇ ಏರ್ಪೋರ್ಟ್ನಲ್ಲಿ ಕಾಯುವ ಪರಿಸ್ಥಿತಿ ಎದುರಾಯಿತು.
ಮುಂಬೈನಿಂದ ಮ್ಯಾಂಚೆಸ್ಟರ್ ಪ್ರಯಾಣಿಸಬೇಕಿದ್ದ ಗಲ್ಫ್ ವಿಮಾನ ಜಿಎಫ್ 005ರಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ವಿಮಾನ ನಿಲ್ದಾಣದಲ್ಲಿ ಸಿಲುಕಿದ ಪ್ರಯಾಣಿಕರಿಗೆ ಈ ವೇಳೆ ಅಗತ್ಯ ಆಹಾರ ಸೇರಿದಂತೆ ಯಾವುದೇ ಅಗತ್ಯ ಸೌಲಭ್ಯವನ್ನು ಕೂಡ ಕಲ್ಪಿಸಲಾಗಿಲ್ಲ. ಇದರಿಂದಾಗಿ ಆಕ್ರೋಶಗೊಂಡ ಪ್ರಯಾಣಿಕರು ಸಾಮಾಜಿಕ ಜಾಲತಾಣದ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕುವೈತ್ ಭಾರತೀಯ ರಾಯಭಾರಿ ಕಚೇರಿ ತಕ್ಷಣಕ್ಕೆ ಪ್ರತಿಕ್ರಿಯಿಸಿದೆ.
Embassy has been informed by Gulf Air that the flight for stranded passengers from Kuwait to Manchester is tentatively scheduled at 3.30 am on 2 Dec. This is being conveyed to all passengers by the Embassy team at the airport. @DrSJaishankar @PMOIndia @MEAIndia @KVSinghMPGonda
— India in Kuwait (@indembkwt) December 1, 2024
ಮುಂಬೈನಿಂದ ಮ್ಯಾಚೆಂಸ್ಟರ್ಗೆ ತೆರಳಬೇಕಿದ್ದ ಪ್ರಯಾಣಕರಾಗಿದ್ದ ಅರೂಜ್ ಸಿಂಗ್ ಕೂಡ ವಿಮಾನ ನಿಲ್ದಾಣದಲ್ಲಿ ಆದ ಸಮಸ್ಯೆ ಕುರಿತು ಎಎನ್ಐಗೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಧ್ವನಿ ಎತ್ತಿದ ಬಳಿಕ ಕುವೈತ್ನಲ್ಲಿರುವ ಭಾರತೀಯ ರಾಯಭಾರಿಗಳು ಏರ್ಪೋರ್ಟ್ನಲ್ಲಿ ಸಿಲುಕಿದ್ದ ಭಾರತೀಯ ಪ್ರಯಾಣಿಕರ ಸಂಪರ್ಕಕ್ಕೆ ಮುಂದಾದರೂ ಎಂದಿದ್ದಾರೆ.
ಬಳಿಕ ಸಿಕ್ಕಿತು ಸೌಲಭ್ಯ: ವಿಮಾನ ನಿಲ್ದಾಣದ ಅಧಿಕಾರಿಗಳ ಜೊತೆ ಚರ್ಚಿಸಿದ ಬಳಿಕ ಹಿರಿಯ ನಾಗರಿಕರು, ಮಕ್ಕಳಿಗೆ ವಿಮಾನ ನಿಲ್ದಾಣದಲ್ಲಿ ಸೌಲಭ್ಯ ಕಲ್ಪಿಸಿಕೊಡಲಾಯಿತು. ಎಷ್ಟು ಜನ ಪ್ರಯಾಣಿಕರಿಗೆ ಉಪಚಾರ ನಡೆಸಲಾಗಿದೆ ಎಂಬ ಖಚಿತ ಮಾಹಿತಿ ಇಲ್ಲ. ಟ್ರಾನ್ಸಿಟ್ ವೀಸಾ ಇಲ್ಲದೇ ಕಾರಣ, ವಿಮಾನ ನಿಲ್ದಾಣದಿಂದ ಹೊರಹೋಗಲು ಸಾಧ್ಯವಾಗುತ್ತಿಲ್ಲ. ಟ್ರಾನ್ಸಿಟ್ ವೀಸಾ ಲಭ್ಯತೆ ಹಿನ್ನೆಲೆ ಯುಕೆ ಮತ್ತು ಅಮೆರಿಕ ಪ್ರಯಾಣಿಕರು ಹೊರ ಹೋಗಿದ್ದರು. ಭಾರತೀಯ ರಾಯಭಾರಿ ಅಧಿಕಾರಿಗಳು ವಿಮಾನ ಸಂಸ್ಥೆಯೊಂದಿಗೆ ಮಾತನಾಡುತ್ತಿದ್ದು, ಪರ್ಯಾಯ ವಿಮಾನ ವ್ಯವಸ್ಥೆ ಕುರಿತು ಚರ್ಚಿಸುತ್ತಿದ್ದಾರೆ. ಆದರೆ, ಯಾವುದೇ ಪ್ರಯೋಜನ ವಾಗಿಲ್ಲ, ಹೀಗಾಗಿ ಪ್ರಯಾಣಿಕರು ಸಮಸ್ಯೆ ಎದುರಿಸುವಂತೆ ಆಗಿದೆ ಎಂದು ವಿವರಿಸಿದರು.
ತಾಂತ್ರಿಕ ಕಾರಣದಿಂದಾಗಿ ಮ್ಯಾಂಚೆಸ್ಟರ್ಗೆ ತೆರಳಬೇಕಿದ್ದ ವಿಮಾನ ಮಾರ್ಗ ಬದಲಾವಣೆ ಮಾಡಿ, ಕುವೈತ್ನಲ್ಲಿ ಲ್ಯಾಂಡ್ ಮಾಡಲಾಗಿದೆ. ಈ ಕುರಿತು ಶಿವಾಂಶು ಎಂಬ ಮತ್ತೊಬ್ಬ ಪ್ರಯಾಣಿಕರ ಕೂಡ ಅಸಮಾಧಾನ ಹೊರ ಹಾಕಿದ್ದಾರೆ. ಬ್ರಿಟಿಷ್ ಪಾಸ್‌ಪೋರ್ಟ್ ಹೊಂದಿರುವವರು ಆನ್ ಅರೈವಲ್ ವೀಸಾದೊಂದಿಗೆ ಹೋಟೆಲ್ಗಳಿಗೆ ಹೋದರು. ಆದರೆ, ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರು ಯಾವುದೇ ಮಾಹಿತಿ, ಆಹಾರ ಅಥವಾ ಯಾವುದೇ ರೀತಿಯ ಸಹಾಯವಿಲ್ಲದೇ ವಿಮಾನ ನಿಲ್ದಾಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದಾರೆ. ದಯವಿಟ್ಟು ಸಹಾಯ ಮಾಡಿ, ವೀಸಾ ಒದಗಿಸಿ ಇದರಿಂದ ಇಂತಹ ಸಮಯದಲ್ಲಿ ಕನಿಷ್ಠ ಹೋಟೆಲ್ ಸೇವೆ ಪಡೆದುಕೊಳ್ಳಬಹುದು ಹಾಗೂ ಮುಂದಿನ ವಿಮಾನಕ್ಕಾಗಿ ಕಾಯಬಹುದು ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕುವೈತ್ನಲ್ಲಿರುವ ಭಾರತೀಯ ರಾಯಭಾರಿಗಳು, ಕುವೈತ್ನಲ್ಲಿ ಸಿಲುಕಿರುವ ಭಾರತೀಯರಿಗೆ ಮ್ಯಾಂಚೆಸ್ಟರ್ಗೆ ಡಿ. 2ಕ್ಕೆ ಮುಂಜಾನೆ 3.30ಕ್ಕೆ ತಾತ್ಕಾಲಿಕ ಸಮಯದಲ್ಲಿ ವಿಮಾನ ವ್ಯವಸ್ಥೆ ಮಾಡಲಾಗಿದೆ ಎಂದು ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ: ಗಿನಿ ಫುಟ್ಬಾಲ್ ಪಂದ್ಯದ ವೇಳೆ ಭಾರಿ ಘರ್ಷಣೆ: ಕಾಲ್ತುಳಿತಕ್ಕೆ 100 ಮಂದಿ ಬಲಿ ಶಂಕೆ