ಗಂಗಾವತಿ : ಕಳೆದ 30 ವರ್ಷಗಳ ಮಾರುಕಟ್ಟೆಯ ಇತಿಹಾಸದಲ್ಲಿ ಎಂದೂ ಕಂಡು ಕೇಳಿರದ ಸಾರ್ವಕಾಲಿಕ ದಾಖಲೆ ಬೆಲೆಗೆ ಈರುಳ್ಳಿ ತಲುಪಿದೆ. ಈ ಹಿಂದೆ ಅತಿ ಹೆಚ್ಚು ಅಂದರೆ 80 ರೂಪಾಯಿಗೆ ಮಾರಾಟವಾಗಿದ್ದ ಈರುಳ್ಳಿ ಈ ಭಾರಿ ಎಲ್ಲ ದಾಖಲೆಗಳನ್ನು ಪುಡಿಗಟ್ಟಿ ಕೆಜಿಗೆ 150 ರೂ ದಾಟಿದೆ.
ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಎಂದರೆ ಸಾಕು ಕತ್ತರಿಸುವವರ ಕಣ್ಣಲ್ಲಿ ಮಾತ್ರವಲ್ಲ, ಅದರ ಬೆಲೆ ಕೇಳುವವರ ಕಣ್ಣಲ್ಲಿಯೂ ನೀರು ಬರುವಂತಾಗಿದೆ. ದಿನದಿಂದ ದಿನಕ್ಕೆ ಈರುಳ್ಳಿ ಬೆಲೆ ಗಗನದತ್ತ ಮುಖಮಾಡಿದ್ದು ಗ್ರಾಹಕರತ್ತ ಮುಖ ಮಾಡುವುದು ಯಾವಾಗ ಎಂಬ ಯಕ್ಷ ಪ್ರಶ್ನೆ ಕಾಡತೊಡಗಿದೆ.
ತರಕಾರಿ ಮಾರುಕಟ್ಟೆಯ ಇತಿಹಾಸದಲ್ಲಿ ಬೀನ್ಸ್ ಮತ್ತು ಕ್ಯಾರೆಟ್ ಮಾತ್ರ ಕೆಜಿಗೆ 150 ರೂ ಆಸುಪಾಸು ಬೆಲೆ ದಾಖಲಿಸಿದ್ದವು. ಇದನ್ನು ಹೊರತುಪಡಿಸಿ ಅತಿ ಹೆಚ್ಚು ಮೌಲ್ಯದ ಧಾರಣೆ ಲಭಿಸಿರುವುದು ಈರುಳ್ಳಿಗೆ ಮಾತ್ರ.
ಮಾರುಕಟ್ಟೆಗೆ ನೆರೆಯ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಆದೋನಿ, ತಾಡಪತ್ರಿ, ಗದ್ವಾಲ್, ಆಲೂರು ಮೊದಲಾದ ಭಾಗದಿಂದ ಈರುಳ್ಳಿ ಅಮದಾಗುತ್ತಿದೆ. ಅದರೂ ಕೂಡ ಈರುಳ್ಳಿ ಬೆಲೆ ಕಡಿಮೆಯಾಗುವ ಲಕ್ಷಣ ಕಂಡು ಬರುತ್ತಿಲ್ಲ ಎಂದು ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ.