ಗಂಗಾವತಿ : ಇಲ್ಲಿನ ದುರುಗಮ್ಮನ ನಾಲಾ, ಜುಲೈನಗರ ಹಾಗೂ ಬೈಪಾಸ್ ರಸ್ತೆಗಳಲ್ಲಿ ವಾರದ ಸಂತೆಯ ದಿನ ನಡೆಯುವ ಸೆಕೆಂಡ್ ಹ್ಯಾಂಡ್ ಬೈಕುಗಳ ಮಾರಾಟ ಮೇಳವನ್ನು ನಗರಸಭೆಯ ಅಧಿಕಾರಿಗಳು ತಡೆದಿದ್ದಾರೆ.
ನಗರಸಭೆಯ ಪೌರಾಯುಕ್ತ ಕೆ ಸಿ ಗಂಗಾಧರ್ ನೇತೃತ್ವದಲ್ಲಿ ನಾನಾ ಸ್ಥಳಕ್ಕೆ ಭೇಟಿ ಕೊಟ್ಟ ಅಧಿಕಾರಿಗಳು, ಪರಿಶೀಲನೆ ನಡೆಸಿದರು. ಬಳಿಕ ಸಂಚಾರಿ ಪೊಲೀಸರ ಸಹಕಾರದೊಂದಿಗೆ ಸಂಡೇ ಬಜಾರ್ ಸ್ಥಗಿತಕ್ಕೆ ಕ್ರಮ ಕೈಗೊಂಡರು.
ಮಾಜಿ ಶಾಸಕರೊಬ್ಬರ ಕೃಷಿ ಭೂಮಿಯಲ್ಲಿ ಈ ಮೊದಲು ದೊಡ್ಡ ಪ್ರಮಾಣದಲ್ಲಿ ಸಂಡೇ ಬಜಾರ್ ನಡೆಯುತಿತ್ತು. ಆದರೀಗ ಲಾಕ್ಡೌನ್ ಆಗಿರುವ ಪರಿಣಾಮ ದಲ್ಲಾಳಿಗಳು ತಮ್ಮ ಸ್ವಂತ ಜಾಗಗಳನ್ನು ಕಂಡುಕೊಂಡು ಅಲ್ಲಿಯೇ ವಹಿವಾಟು ನಡೆಸುತ್ತಿದ್ದಾರೆ.
ಲಾಕ್ಡೌನ್ ಸಂದರ್ಭದಲ್ಲಿ ಬೈಕ್ ಮಾರಲು ಮತ್ತು ಕೊಳ್ಳಲು ಬರುವ ಗ್ರಾಹಕರು ಯಾವುದೇ ಸಾಮಾಜಿಕ ಅಂತರ ಕಾಪಾಡುತ್ತಿಲ್ಲ. ಎಂಬ ದೂರಿನ ಹಿನ್ನೆಲೆ ಸಾಕಷ್ಟು ಸಂಘ-ಸಂಸ್ಥೆಗಳು ಸಂಡೇ ಬಜಾರ್ ಸ್ಥಗಿತಕ್ಕೆ ಒತ್ತಾಯಿಸಿದ್ದೆವು. ಈ ಹಿನ್ನೆಲೆ ಅಧಿಕಾರಿಗಳು ಕ್ರಮ ಕೈಗೊಂಡರು.