ಕೊಪ್ಪಳ: ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜು ಆವರಣದ ಪ್ರಾಥಮಿಕ ಶಾಲಾ ಗೋಡೆ ಮೇಲೆ ವಿದ್ಯಾರ್ಥಿನಿಯರ ಹೆಸರಿನಲ್ಲಿ ಕಿಡಿಗೇಡಿಗಳು ಅಶ್ಲೀಲ ಗೋಡೆ ಬರಹ ಬರದಿದ್ದು, ಕೋಮುವಾದಕ್ಕೆ ಪ್ರಚೋದನೆ ನೀಡಿದಂತಾಗಿದೆ. ಅಲ್ಲದೇ ಶಾಲೆಗೆ ಬರುವ ವಿದ್ಯಾರ್ಥಿನಿಯರು ಮುಜುಗರಕ್ಕೀಡಾಗುವಂತಹ ಘಟನೆ ಇಂದು ಜರುಗಿದೆ. ಈ ಹಿಂದೆ ಇದೇ ರೀತಿಯ ಕೆಲವು ವಿದ್ಯಾರ್ಥಿನಿಯರ ಹೆಸರು ಬರೆದಿದ್ದರು. ಈ ಕುರಿತು ಪೊಲೀಸ್ ಇಲಾಖೆಗೆ ದೂರು ನೀಡಲಾಗಿತ್ತು. ಆದರೂ ಮತ್ತೆ ಅದೇ ರೀತಿಯ ಘಟನೆ ಮುಂದುವರೆದಿದೆ.
ಶಾಲೆ ಶಿಕ್ಷಕಿ ಮಂಜುಳಾ ಅವರು ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ್ದು, ''ಶಾಲೆ ದೇವಾಲಯವಿದ್ದಂತೆ. ಆದರೆ, ಇಲ್ಲಿ ನಮ್ಮ ಕೆಲವು ವಿದ್ಯಾರ್ಥಿನಿಯರು ಶಾಲೆಗೆ ಬರದಂತೆ ಶಾಲೆಯ ಗೋಡೆ ಮೇಲೆ ಅಶ್ಲೀಲವಾಗಿ ಬರೆದು ಹಾಕುತ್ತಿದ್ದಾರೆ. ಇದು ಬಹಳ ಖಂಡನೀಯ. ಸರ್ಕಾರ ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಹೊತ್ತಿನಲ್ಲಿ ಇತರ ವ್ಯಕ್ತಿಗಳು ಈ ರೀತಿ ಗೋಡೆ ಮೇಲೆ ಬರೆದು ಹಾಕುತ್ತಿರುವುದರಿಂದ ಕೆಲವು ವಿದ್ಯಾರ್ಥಿನಿಯರು ಶಾಲೆಗೆ ಬರಲು ಅಂಜುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಕೂಡ ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟವರು ಕ್ರಮ ತೆಗೆದುಕೊಂಡು ವಿದ್ಯಾರ್ಥಿನಿಯರ ವಿದ್ಯಾರ್ಜನೆಗೆ ಅನುಕೂಲ ಮಾಡಿಕೊಡಬೇಕು'' ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಪ್ರಕರಣ ಕುರಿತು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಪ್ರತಿಕ್ರಿಯೆ ನೀಡಿದ್ದು, ''ಇಂದು ಮತ್ತೆ ಶಾಲಾ ಗೋಡೆ ಮೇಲೆ ಅಶ್ಲೀಲ ಬರಹ ಬರೆದಿದ್ದಾರೆ ಎಂಬ ಮಾಹಿತಿ ಬಂದಿದೆ. ಸ್ಥಳಕ್ಕೆ ಗಂಗಾವತಿ ಡಿವೈಎಸ್ಪಿ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಬೆರಳಚ್ಚು ತಂಡ ಹಾಗೂ ಶ್ವಾನ ದಳವನ್ನು ಸ್ಥಳಕ್ಕೆ ಕಳುಹಿಸಲಾಗುತ್ತಿದೆ. ಇಬ್ಬರು ಹುಡುಗರು ಆ ರೀತಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದ್ದು, ಸುಮಾರು 15 ಯುವಕರನ್ನು ಪ್ರತ್ಯೇಕವಾಗಿ ಕರೆದು ವಿಚಾರಣೆ ನಡೆಸಲಾಗಿದೆ.
ಈ ಹಿಂದೆ ಇದೇ ರೀತಿ ಅಶ್ಲೀಲ ಗೋಡೆ ಬರಹ ಬರೆದಿರುವ ಪ್ರಕರಣ ಗಮನಕ್ಕೆ ಬಂದಿದೆ. ಈ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ತನಿಖೆ ಮಾಡಲಾಗುತ್ತಿದೆ. ಕೆಲ ಕಾರಣಾಂತರದಿಂದ ಅಲ್ಲಿ ನೈಟ್ ಬೀಟ್ ಹಾಕಲು ಆಗಿಲ್ಲ. ಸಿಸಿ ಕ್ಯಾಮರಾ ಅಳವಡಿಸುವಂತೆ ಸೂಚನೆ ನೀಡಲಾಗಿದೆ. ಈ ಪ್ರಕರಣವನ್ನು ಬಹಳ ಗಂಭೀರವಾಗಿ ಪರಿಗಣಿಸಿದ್ದು, ಎಲ್ಲ ದೃಷ್ಟಿಕೋನದಿಂದ ಪರಿಶೀಲನೆ ನಡೆಸುತ್ತಿದ್ದೇವೆ'' ಎಂದಿದ್ದಾರೆ.
ಇದನ್ನೂ ಓದಿ: ವಿವಾದಾತ್ಮಕ ಗೋಡೆ ಬರಹ: ಮಾಜಿ ಸಚಿವ ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದೇನು?