ಕುಷ್ಟಗಿ (ಕೊಪ್ಪಳ): ಕುಷ್ಟಗಿ- ಇಲಕಲ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಡೆಕೊಪ್ಪ ಕ್ರಾಸ್ ಕೆಳ ಸೇತುವೆ ಸರ್ವಿಸ್ ರಸ್ತೆ ದಶಕ ಕಳೆದರೂ ಸುಧಾರಣೆಯಾಗದಿರುವುದು ಸಾರ್ವಜನಿಕರ ನಿದ್ದೆ ಕೆಡಿಸಿದೆ.
ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹೆದ್ದಾರಿಗೆ ಆದ್ಯತೆ ನೀಡಿದೆ ವಿನಃ ಕೆಳ ಸೇತುವೆ, ಮೇಲ್ಸೇತುವೆ ಪಕ್ಕದ ಸರ್ವಿಸ್ ರಸ್ತೆಗಳಿಗೆ ಆದ್ಯತೆ ನೀಡಿಲ್ಲ. ಈಗಲೂ ತಾಲೂಕಿನ ಹೆದ್ದಾರಿ ವ್ಯಾಪ್ತಿಯ ಕಡೇಕೊಪ್ಪ, ವಣಗೇರಾ ಕೆಳ ಸೇತುವೆಗಳ ಸರ್ವಿಸ್ ರಸ್ತೆ ಅಭಿವೃದ್ದಿ ಮರೀಚಿಕೆಯಾಗಿ ಡಾಂಬರ್ ಭಾಗ್ಯ ಕಂಡಿಲ್ಲ. ರಸ್ತೆಯಲ್ಲಿ ಗುಂಡಿ ಬಿದ್ದು ನೀರು ನಿಂತಿದ್ದು ರಸ್ತೆಯ ಅಕ್ಕ ಪಕ್ಕ ಮುಳ್ಳು ಗಿಡಗಳು ಬೆಳೆದಿವೆ.
ಇನ್ನು ಈ ಬಗ್ಗೆ ಹಲವು ಸಲ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರ ಗಮನಕ್ಕೆ ತರಲಾಗಿದೆ. ಸಂಸದರ ಮುಂದೆ ಅಭಿವೃದ್ಧಿ ಮಾಡುವುದಾಗಿ ತಲೆ ಅಲ್ಲಾಡಿಸುವ ಅಧಿಕಾರಿಗಳು ಯಾವುದೇ ಸರ್ವಿಸ್ ರಸ್ತೆಯ ಅಭಿವೃದ್ದಿಗೆ ಮುಂದಾಗಿಲ್ಲ. ಸರ್ವಿಸ್ ರಸ್ತೆಗಳ ಬಗ್ಗೆ ನಿರ್ಲಕ್ಷ ಹಾಗೂ ತಾರತಮ್ಯದ ಬಗ್ಗೆ ಜನರಿಂದ ಆಕ್ರೋಶ ವ್ಯಕ್ತವಾಗಿದೆ.