ಕೊಪ್ಪಳ: ಆನೆಗೊಂದಿ ಉತ್ಸವದ ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಜನರ ಮನಸೂರೆಗೊಂಡವು. ಅದರಲ್ಲೂ ಹಿನ್ನೆಲೆ ಗಾಯಕ ವಿಜಯಪ್ರಕಾಶ್ ಅವರ ಸಂಗೀತ ಕಾರ್ಯಕ್ರಮ ನೆರೆದ ಜನರನ್ನು ರಂಜಿಸಿತು.
ನೀನೆ ರಾಜಕುಮಾರ ಚಿತ್ರದ ಗೊಂಬೆ ಹೇಳುತೈತೆ, ಕಿರಿಕ್ ಪಾರ್ಟಿ ಚಿತ್ರದ ಬೆಳಗೆದ್ದು ಯಾರ ಮುಖವ ನಾನು ನೋಡಿದೆ ಹಾಗೂ ಅವನೇ ಶ್ರೀಮನ್ ನಾರಾಯಣ ಚಿತ್ರದ ಹಾಡುಗಳನ್ನು ಹಾಡುವ ಮೂಲಕ ಎಲ್ಲರನ್ನು ರಂಜಿಸಿದರು. ಬಳಿಕ ಚೌಕ ಚಿತ್ರದ ಜೀವನ ಟಾನಿಕ್ ಬಾಟ್ಲಿ ಕುಡಿಯೋ ಮುಂಚೆ ಅಲ್ಲಾಡ್ಸು, ತರವಲ್ಲ ತಗಿ ನಿನ್ನ ತಂಬೂರಿ ಹಾಡು ಹಾಗೂ ಅವರ ತಂಡದವರು ಹಾಡಿದ ಟಗರು ಬಂತು ಟಗರು ಹಾಡುಗಳು ನೆರೆದಿದ್ದ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು. ರಾತ್ರಿ ಸುಮಾರು 2 ಗಂಟೆವರೆಗೂ ವಿಜಯ್ ಪ್ರಕಾಶ್ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಆನೆಗೊಂದಿ ಉತ್ಸವದ ಮೊದಲನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳು ಉತ್ಸವಕ್ಕೆ ಬಂದವರಿಗೆ ಭರ್ಜರಿ ರಸದೌತಣ ನೀಡಿದವು.
ಆದ್ರೆ ಈ ಸಂದರ್ಭದಲ್ಲಿ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಹಾಗೂ ಡಿಸಿಪಿ ಸುನೀಲಕುಮಾರ್ ನಡುವೆ ಕಿರಿಕ್ ಕೂಡಾ ನಡೆಯಿತು. ಗಾಯಕ ವಿಜಯಪ್ರಕಾಶ್ಗೆ ಸನ್ಮಾನ ಮಾಡುವ ವಿಚಾರದಲ್ಲಿ ಈ ಗೊಂದಲ ಉಂಟಾಯಿತು. ಡಿಸಿ ತಾವೊಬ್ಬರೇ ವಿಜಯಪ್ರಕಾಶ್ ಅವರಿಗೆ ಸನ್ಮಾನ ಮಾಡಿದರು ಎಂಬ ವಿಷಯಕ್ಕೆ ಮುನಿಸಿಕೊಂಡ ಶಾಸಕ ಪರಣ್ಣ ಮುನವಳ್ಳಿ ಡಿಸಿ ವಿರುದ್ಧ ಅಸಮಧಾನ ಹೊರಹಾಕಿದರು. ಕೊನೆಗೆ ಗಾಯಕ ವಿಜಯಪ್ರಕಾಶ್ ಅವರು ವೇದಿಕೆಯಿಂದ ಕೆಳಗಿಳಿದು ಬಂದು ಶಾಸಕರ ಮನವೊಲಿಸಿದರು. ಮನವೊಲಿಕೆ ಬಳಿಕ ಶಾಸಕ ಪರಣ್ಣ ತಮ್ಮ ಬೆಂಬಲಿಗರೊಂದಿಗೆ ವೇದಿಕೆಗೆ ಬಂದು ಗಾಯಕ ವಿಜಯಪ್ರಕಾಶ್ಗೆ ಮತ್ತೊಮ್ಮೆ ಸನ್ಮಾನಿಸಿದರು.