ಕೊಪ್ಪಳ: ಹಣದ ವಿಚಾರಕ್ಕೆ ಯುವಕನೊಬ್ಬನನ್ನು ಕೊಲೆ ಮಾಡಿ ಕೆರೆಗೆ ಬಿಸಾಕಿದ್ದ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪೊಲೀಸರು ಪ್ರಮುಖ ಆರೋಪಿಯನ್ನು ಸೋಮವಾರ ಬಂಧಿಸಿದ್ದಾರೆ.
ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ತಳಬಾಳ ಸೀಮಾದಲ್ಲಿನ ಕೆರೆಯೊಂದರಲ್ಲಿ ಅ.4 ರಂದು ಯುವಕನ ಶವ ಪತ್ತೆಯಾಗಿತ್ತು. ಮೇಲನೋಟಕ್ಕೆ ಇದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಕೆರೆಗೆ ಬಿಸಾಕಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಪ್ರಕರಣ ಬೆನ್ನಟ್ಟಿದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಪ್ರಕರಣದ ನಂತರ ತಲೆಮರೆಸಿಕೊಂಡಿದ್ದ ಪ್ರಮುಖ (ಎ1) ಆರೋಪಿ ಜಡ್ಡಾ ನಾರಾಯಣಸ್ವಾಮಿಯನ್ನು ನಿನ್ನೆ (ಸೋಮವಾರ) ಬಂಧಿಸಲಾಗಿದೆ ಎಂದು ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ತಿಳಿಸಿದ್ದಾರೆ. ಈ ಹಿಂದೆ ಅಕ್ಟೋಬರ್ 12ರಂದು (ಎ2) ಆರೋಪಿಯನ್ನು ಬಂಧನ ಮಾಡಲಾಗಿತ್ತು.
ಪ್ರಕರಣದ ಹಿನ್ನೆಲೆ: ಕೊಪ್ಪಳ ಜಿಲ್ಲೆ ಡಂಬರಳ್ಳಿ ಗ್ರಾಮದ ಚಂದ್ರಗೌಡ ನಂದನಗೌಡ್ರ (30) ಎಂಬ ವ್ಯಕ್ತಿ ಸೆ.29 ರಂದು ಕಾಣಿಯಾದ ಬಗ್ಗೆ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಕ್ಟೋಬರ್ 4ರಂದು ಕುಕನೂರು ತಾಲೂಕು ತಳಬಾಳ ಹತ್ತಿರದ ಬಾವಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧಿಸಿದಂತೆ ಕುಕನೂರು ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಯಿತು. ಈ ಕುರಿತು ತನಿಖೆ ಕೈಗೊಂಡಾಗ ಚಂದ್ರಗೌಡ ಕೊಲೆಯಾಗಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ರಾಯಚೂರು: ಲ್ಯಾಬ್ ಟೆಕ್ನಿಷಿಯನ್ ಮಂಜುಳಾ ಸಾವಿನ ಪ್ರಕರಣಕ್ಕೆ ಟ್ವಿಸ್ಟ್
ಪ್ರತ್ಯೇಕ ಪ್ರಕರಣ - ಹಳೆ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯ ಹತ್ಯೆ: ಮತ್ತೊಂದೆಡೆ, ಹಳೇ ವೈಷಮ್ಯದ ಹಿನ್ನೆಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಮದ್ಲಾಪುರ ಗ್ರಾಮದ ಬಳಿ ನಿನ್ನೆ (ಸೋಮವಾರ) ನಡೆದಿದೆ. ರಬಣಕಲ್ ಗ್ರಾಮದ ಪ್ರಸಾದ್ (38) ಕೊಲೆಯಾದ ವ್ಯಕ್ತಿ. ಬೆಳಗ್ಗೆ ಭತ್ತದ ಗದ್ದೆಗೆ ನೀರು ಹಾಯಿಸಲು ತೆರಳಿದಾಗ ಏಕಾಏಕಿ ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿದ ಮೂವರು ದುಷ್ಕರ್ಮಿಗಳು, ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ರಬಣಕಲ್ ಗ್ರಾಮದ ಮೂವರು ಹತ್ಯೆ ಮಾಡಿರುವುದಾಗಿ ಆರೋಪಿಸಲಾಗಿದೆ. ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತಾಲೂಕು ಆಸ್ಪತ್ರೆಗೆ ಕಳುಹಿಸಲಾಗಿದೆ.
ಪ್ರತ್ಯೇಕ ಪ್ರಕರಣ - ಕಾಂಗ್ರೆಸ್ ಮುಖಂಡನ ಕೊಲೆ: ಮತ್ತೊಂದೆಡೆ, ದಲಿತ ಮತ್ತು ಕಾಂಗ್ರೆಸ್ನ ಸ್ಥಳೀಯ ಮುಖಂಡರೊಬ್ಬರನ್ನು ಅಪರಿಚಿತರ ಗುಂಪೊಂದು ಹತ್ಯೆ ಮಾಡಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ಅಕ್ಟೋಬರ್ 23ರಂದು ನಡೆದಿತ್ತು. ಇಲ್ಲಿನ ಹೊಗಳಗೆರೆ ರಸ್ತೆಯಲ್ಲಿನ ತೋಟದ ಸಮೀಪ ದುಷ್ಕರ್ಮಿಗಳು ಮುಖಂಡನನ್ನು ಹತ್ಯೆ ಮಾಡಿ ಪರಾರಿಯಾಗಿದ್ದರು. ಶ್ರೀನಿವಾಸ್ ಮೃತ ವ್ಯಕ್ತಿ. ಇದಕ್ಕೂ ಮುನ್ನ ಮಾಲೂರು ತಾಲೂಕಿನ ಜಯಮಂಗಲ ಗ್ರಾಪಂ ಸದಸ್ಯ ಅನಿಲ್ ಅವರನ್ನು ಕೊಲೆ ಮಾಡಲಾಗಿತ್ತು. ಕೌನ್ಸಿಲರ್ ಶ್ರೀನಿವಾಸ್ ಅವರು, ಶ್ರೀನಿವಾಸಪುರದಲ್ಲಿ ಪ್ರಭಾವಿ ಮುಖಂಡರಾಗಿದ್ದರು. ಕಳೆದ 40 ವರ್ಷಗಳಿಂದ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು.