ಕೊಪ್ಪಳ: ಕುಷ್ಟಗಿ ತಾಲೂಕಿನ ದೋಟಿಹಾಳ-ಮುದೇನೂರು ರಸ್ತೆಯ ಬನ್ನಟ್ಟಿ ಗ್ರಾಮದ ಬಳಿ ನಿರ್ಮಿಸಿದ್ದ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದ್ದು, ಮತ್ತೆ ಸಂಪರ್ಕ ಕಡಿತವಾಗಿದೆ.
ಕೊಪ್ಪಳ, ಬಾಗಲಕೋಟೆ, ರಾಯಚೂರು ಜಿಲ್ಲೆಗಳನ್ನು ಸಂಪರ್ಕಿಸುವ ರಸ್ತೆ ಇದಾಗಿದ್ದು, ಕಳೆದ ಆಗಸ್ಟ್ ಕೊನೆಯ ವಾರದಿಂದ ಈವರೆಗೆ ಮೂರ್ನಾಲ್ಕು ಬಾರಿ ಈ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗಿದೆ. ಗುತ್ತಿಗೆದಾರರು ತಾತ್ಕಾಲಿಕ ರಸ್ತೆಗೆ ಮಣ್ಣು ಹಾಕುವುದು, ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗುವುದು ಇದೇ ಆಗಿದೆ. ಪದೇ ಪದೇ ರಸ್ತೆ ಸಂಪರ್ಕ ಕಡಿತಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಶ್ವತ ಮುಕ್ತಿಗೆ ಸೇತುವೆ ನಿರ್ಮಾಣ ಕಾಮಗಾರಿ ಮೂರು ವರ್ಷಗಳಾದರೂ ಅರ್ಧಕ್ಕೆ ನಿಂತಿದ್ದು, ಗುತ್ತಿಗೆದಾರರಿಗೆ ತಾತ್ಕಾಲಿಕ ಸೇತುವೆ ಕೊಚ್ಚಿ ಹೋಗುವುದು ನೆಪವಾಗಿದೆ. ಮಳೆಗಾಲ ಮುಗಿಯುತ್ತಿದ್ದಂತೆ ಗುಣಮಟ್ಟದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.