ಕೊಪ್ಪಳ: ರೈತರ ಕೃಷಿ ಪಂಪ್ ಸೆಟ್‌ಗಳಿಗೆ ರಾಜ್ಯ ಸರ್ಕಾರ ಮೊದಲು ನೀಡುತ್ತಿದ್ದ ಪರಿವರ್ತಕ ಸಹಿತ ಉಚಿತ ಮೂಲ ಸೌಕರ್ಯ ಒದಗಿಸುವ ಯೋಜನೆ ಸ್ಥಗಿತಗೊಳಿಸಿದೆ. ಈ ಯೋಜನೆಯನ್ನು ಪುನಃ ಆರಂಭಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಸಂಸದ ಸಂಗಣ್ಣ ಕರಡಿ ಅವರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆತ್ತಿದ್ದರು. ಮಂಗಳವಾರ ಎಳೆನೀರು ಕುಡಿಯುವ ಮೂಲಕ ಸಂಗಣ್ಣ ಕರಡಿ ಅವರು ಉಪವಾಸ ಸತ್ಯಾಗ್ರಹ ಕೈ ಬಿಟ್ಟರು.
ಮಂಗಳವಾರ ಬೆಳಗ್ಗೆ ಜಿಲ್ಲೆಗೆ ಭೇಟಿ ನೀಡಿದ್ದ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದರನ್ನು ಮನವೊಲಿಸುವ ಪ್ರಯತ್ನ ಮಾಡಿದರು. ಸರ್ಕಾರ ರೈತರಿಗೆ ಅನುಕೂಲವಾಗುವ ರೀತಿಯಲ್ಲಿಯೇ ನಡೆದುಕೊಳ್ಳಲಿದೆ. ಈ ಕುರಿತು ಸರಕಾರದ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಉಪಸ್ಥಿತರಿದ್ದರು. ನ. 9ರ ಒಳಗೆ ಈ ಕುರಿತು ಸಚಿವ ಶಿವರಾಜ ತಂಗಡಗಿ ಸರ್ಕಾರದ ಜೊತೆ ಮಾತನಾಡಿ ಕ್ರಮ ಕೈಗೊಳ್ಳುಬೇಕು. ಆ ಧೈರ್ಯ ನೀಡದಿದ್ದರೆ ನಮಗೆ ಮಾತು ಕೊಡಬೇಡಿ. ನಂ.9 ನಂತರ ಆದೇಶ ಬದಲಾಗದಿದ್ದರೆ ಅದರ ಪರಿಣಾಮ ಬಹಳ ಕೆಟ್ಟದಾಗಿರಲಿದೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, 500 ಮೀಟರ್ ವರೆಗೆ ಉಚಿತವಾಗಿ ವಿದ್ಯುತ್ ಕಂಬ ಹಾಗೂ ತಂತಿ ನೀಡುತ್ತೇವೆ. ಜಿಲ್ಲೆಯಲ್ಲಿ 273 ಅಕ್ರಮ ಪಂಪ್ ಸೆಟ್ಗಳಿವೆ. ಅವುಗಳನ್ನು ಸಕ್ರಮ ಮಾಡುತ್ತೇವೆ. ಸರ್ಕಾರದ ಆದೇಶದಲ್ಲಿ ಹೊಸ ಪಂಪ್ ಸೆಟ್‌ಗಳಿಗೆ ರೈತರೇ ಹಣ ಭರಿಸಬೇಕು ಎಂಬ ಆದೇಶ ತಿದ್ದುಪಡಿ ಮಾಡುತ್ತೇವೆ. ಈ ಬಗ್ಗೆ ಇಂಧನ ಸಚಿವ ಹಾಗೂ ಇಲಾಖೆಯ ಕಾರ್ಯದರ್ಶಿಯೊಂದಿಗೆ ಮಾತನಾಡಿರುವುದಾಗಿ ಹೇಳಿದರು. 15 ದಿನಗಳಲ್ಲಿ ಆದೇಶ ಹೊರ ಬೀಳಲಿದೆ. ನೀವು ನಿರಶನ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು. ಸಚಿವ ಬೈರೇಗೌಡ ಸಹ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತನಾಡಿದರು.
ಸಂಸದ ಸಂಗಣ್ಣ ಕರಡಿ ಹೇಳಿಕೆ: ''ನಾನೊಬ್ಬ ಜನಪ್ರತಿನಿಧಿಯಾಗಿದ್ದು, ಕೊಪ್ಪಳ ಜಿಲ್ಲೆಯಾಗಿ 26 ವರ್ಷವಾಗಿದೆ. ಕೊಪ್ಪಳದವರೊಬ್ಬರು ಸಚಿವರಾಗಿ ಆಯ್ಕೆಯಾಗಿಲ್ಲ. ಸಚಿವ ಸ್ಥಾನ ಕೊಟ್ಟರೆ, ಕೊಪ್ಪಳ ಜಿಲ್ಲೆಯ ಅನೇಕ ಯೋಜನೆಗಳಿಗೆ ಚಾಲನೆ ಲಭಿಸುತ್ತಿದ್ದವು. ಕೋರ್ಟ್ ಕಟ್ಟಡ ನಿರ್ಮಾಣ ವಿಚಾರದಲ್ಲಿ ನನಗೆ ತುಂಬಾ ಮುಜುಗರವಾಗಿದೆ'' ಎಂದರು. ನಾನು ಪಕ್ಷದ ವಿರೋಧಿಯಲ್ಲ. ಕಾಂಗ್ರೆಸ್ ಸರ್ಕಾರದ ಹಣೆಬರಹ ಕೂಡ ಅಷ್ಟೆ. ಅಭಿವೃದ್ಧಿ ವಿಚಾರದಲ್ಲಿ ನಮಗೆ ಸೌಲಭ್ಯಗಳು ದೊರೆಯಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಿಜೆಪಿಯವರಿಗೆ ರೈತರ ಮೇಲೆ ಗೌರವ, ಕಾಳಜಿ ಇದ್ದರೆ ಮೊದಲು ಪರಿಹಾರ ಕೊಡಿಸಲಿ: ಸಿಎಂ ಸಿದ್ದರಾಮಯ್ಯ