ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ನಿಂದ ಗಂಗಾವತಿವರೆಗೆ ನೂತನ ರೇಲ್ವೆ ಮಾರ್ಗ ಉದ್ಘಾಟನೆ ಹಾಗೂ ಗಂಗಾವತಿ - ಹುಬ್ಬಳ್ಳಿ ನೂತನ ಪ್ಯಾಸೆಂಜರ್ ರೈಲಿಗೆ ಸಂಸದ ಸಂಗಣ್ಣ ಕರಡಿ ಹಸಿರು ನಿಶಾನೆ ತೋರಿದರು.
ಬಳಿಕ ಮಾತನಾಡಿ, ದೇವೇಗೌಡ ಅವರು ಪ್ರಧಾನಿಯಾಗಿದ್ದಾಗ ಮುನಿರಾಬಾದ್ -ಮೆಹಬೂಬನಗರ ರೇಲ್ವೆ ಯೋಜನೆಗೆ ಅಡಿಗಲ್ಲು ಹಾಕಿದರು. ಈ ಸಂದರ್ಭದಲ್ಲಿ ದೇವೇಗೌಡ ಹಾಗೂ ರಾಯರಡ್ಡಿ ಅವರನ್ನು ನಾವು ಸ್ಮರಿಸಬೇಕು. ಬಹಳ ಹಿಂದಿನಿಂದ ಈ ಯೋಜನೆ ನನೆಗುದಿಗೆ ಬಿದ್ದಿತ್ತು. ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಕಾಮಗಾರಿಯ ವೇಗಪಡಿದುಕೊಂಡು ಈಗ ಗಂಗಾವತಿವರೆಗೆ ಪೂರ್ಣಗೊಂಡು, ಇಂದಿನಿಂದ ರೈಲು ಓಡಾಟಕ್ಕೆ ಚಾಲನೆ ನೀಡಲಾಗಿದೆ ಎಂದರು.
ಕೊಪ್ಪಳ ಲೋಕಸಭಾ ವ್ಯಾಪ್ತಿಯಲ್ಲಿನ ಸಿಂಧನೂರುವರೆಗೆ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಯೋಜನೆ ಪೂರ್ಣಗೊಳ್ಳಲಿದೆ. ಯೋಜನೆಗೆ ಭೂಮಿ ಕೊಟ್ಟ ರೈತರನ್ನು ನಾವು ಸ್ಮರಿಸಬೇಕು ಎಂದರು. ಇನ್ನು ಈಗ ಗಂಗಾವತಿವರೆಗೆ ರೈಲು ಆರಂಭಗೊಂಡಿರೋದು ಈ ಭಾಗದ ಜನರಿಗೆ ತುಂಬಾ ಸಂತಸ ನೀಡಿದೆ ಎಂದರು.
ಇದಕ್ಕೂ ಮೊದಲು ಗಂಗಾವತಿ ರೇಲ್ವೆ ನಿಲ್ದಾಣಕ್ಕೆ ರೈಲಿನಲ್ಲಿ ಆಗಮಿಸಿದ ಸಂಸದ ಸಂಗಣ್ಣ ಕರಡಿ ಹಾಗೂ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರನ್ನು ಅಭಿಮಾನಿಗಳು ಎತ್ತಿಕೊಂಡು ಅಭಿಮಾನ ವ್ಯಕ್ತಪಡಿಸಿದರು. ಇನ್ನು ಮೊದಲ ಬಾರಿಗೆ ತಮ್ಮೂರಿಗೆ ಬಂದ ರೇಲು ನೋಡಲು ಮಕ್ಕಳಾದಿಯಾಗಿ ಸಾರ್ವಜನಿಕರು ಕಿಕ್ಕಿರಿದು ನೆರೆದಿದ್ದರು.