ಕುಷ್ಟಗಿ/ ಕೊಪ್ಪಳ : ಪಟ್ಟಣದ ಹೊರವಲಯದ ಕೃಷ್ಣಗಿರಿ ಕಾಲೊನಿ ಬಳಿ ಇರುವ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಂತು, ಜನ ಸಂಚಾರ ಕಷ್ಟವಾಗಿದ್ದು, ಸ್ಥಳಕ್ಕೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಭೇಟಿ ನೀಡಿ ಪರಿಶೀಲಿಸಿದರು.
ಏ.29 ರಂದು ಈಟಿವಿ ಭಾರತ ''ಕೃಷ್ಣಗಿರಿ ಹೆದ್ದಾರಿಯ ಅಂಡರ್ ಪಾಸ್ನಲ್ಲಿ ಪಾದಚಾರಿಗಳಿಗೆ ನರಕಯಾತನೆ'' ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು.
ಈ ಸುದ್ದಿ ಪ್ರಕಟವಾದ ನಂತರ ಸಂಸದರು ಸ್ಥಳಕ್ಕೆ ಭೇಟಿ ನೀಡಿ 2 ಅಡಿ ನೀರು ನಿಂತಿರುವುದನ್ನು ವೀಕ್ಷಿಸಿದ್ರು. ಇಲ್ಲಿನ ಅವ್ಯವಸ್ಥೆಯನ್ನು ಕೂಡಲೇ ಸರಿಪಡಿಸುವಂತೆ ಎನ್.ಎಚ್.ಎ.ಐ. ಯೋಜನಾ ನಿರ್ದೇಶಕರಿಗೆ ಸೂಚಿಸಿದರು.
ನಂತರ ಸಂಸದ ಕರಡಿ ಸಂಗಣ್ಣ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತಾಡಿ, ಈ ಹೆದ್ದಾರಿ ಮೇಲ್ಸೇತುವೆ ಅವೈಜ್ಞಾನಿಕವಾಗಿದೆ. ಪ್ರತಿ ವರ್ಷದ ಮಳೆಗಾಲದಲ್ಲೂ ಈ ಸಮಸ್ಯೆ ಎದುರಾಗುತ್ತೆ. ಇದರಲ್ಲಿನ ಮಳೆ ನೀರನ್ನು ಮೋಟಾರ್ ಪಂಪ್ ಸಹಾಯದಿಂದ ಎತ್ತುವಳಿಯೇ ಪರಿಹಾರವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಇಲ್ಲಿನ ಅಂಡರ್‌ಪಾಸ್‌ಗೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್,ಎಚ್.ಎ.ಐ) ಯೋಜನಾ ನಿರ್ದೇಶಕರಿಗೆ ನಿರ್ದೇಶನ ನೀಡಿ, ಜನರ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಕ್ರಮವಹಿಸಲು ನಿರ್ದೇಶನ ಕೊಟ್ಟರು.
ಈ ವೇಳೆ ಜಿಲ್ಲಾ ಬಿಜೆಪಿ ಅಧ್ಯಕ್ಷ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ಜಿ.ಪಂ. ಅಧ್ಯಕ್ಷ ವಿಶ್ವನಾಥರಡ್ಡಿ ಹೊಸಮನಿ, ಸದಸ್ಯರಾದ ಕೆ.ಮಹೇಶ, ವಿಜಯಕುಮಾರ, ತಾ.ಪಂ. ಅಧ್ಯಕ್ಷೆ ಮಹಾಂತಮ್ಮ ಪೂಜಾರಿ ಹಾಜರಿದ್ರು.