ಕೊಪ್ಪಳ: ಕೊರೊನಾ ಮೂರನೇ ಅಲೆ ಮಕ್ಕಳನ್ನು ಬಾಧಿಸಲಿದೆ ಎಂಬ ಭೀತಿ ನಡುವೆಯೇ ಕೊಪ್ಪಳ ಜಿಲ್ಲೆಯ ಮಕ್ಕಳಲ್ಲಿ ಶೀತ, ಜ್ವರದಂತ ಲಕ್ಷಣಗಳು ಕಂಡು ಬರುತ್ತಿದ್ದು ನಗರದಲ್ಲಿನ ಬಹುತೇಕ ಮಕ್ಕಳ ಆಸ್ಪತ್ರೆಗಳು ಹೌಸ್ಫುಲ್ ಆಗಿವೆ. ಆದರೆ ಇದು ಕೊರೊನಾ ಸೋಂಕಿನ ಲಕ್ಷಣಗಳಲ್ಲ ಎಂದು ವೈದ್ಯರು ಹೇಳುತ್ತಿದ್ದಾರೆ.
ಕೊಪ್ಪಳ ನಗರ ಸೇರಿದಂತೆ ಜಿಲ್ಲೆಯಲ್ಲಿ ಮಕ್ಕಳಿಗೆ ನೆಗಡಿ, ಕೆಮ್ಮು ಹಾಗೂ ಜ್ವರದಂತಹ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ಹೀಗಾಗಿ ಆಸ್ಪತ್ರೆಗಳು ಚಿಕ್ಕ ಮಕ್ಕಳಿಂದ ತುಂಬಿ ತುಳುಕುತ್ತಿದ್ದು, ನಗರದಲ್ಲಿನ ಜಿಲ್ಲಾಸ್ಪತ್ರೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಕ್ಕಳ ತಜ್ಞರಾದ ಡಾ.ಅಜಯ್ ಬಾಚಲಾಪುರ, ನಗರದ ಕೆಲ ಆಸ್ಪತ್ರೆಗಳಲ್ಲಿ ಬೆಡ್ ಖಾಲಿ ಇಲ್ಲ ಎಂಬ ಬೋರ್ಡ್ ಸಹ ಹಾಕಲಾಗಿದೆ. ಜ್ವರ, ನೆಗಡಿ ಹಾಗೂ ಕೆಮ್ಮಿನಿಂದ ಬಳಲುತ್ತಿರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ. ಆದರೆ ಇದು ಕೊರೊನಾ ಲಕ್ಷಣಗಳು ಅಲ್ಲ. ಅನುಮಾನ ಬಂದ ಮಕ್ಕಳನ್ನು ಕೊರೊನಾ ತಪಾಸಣೆಗೆ ಕಳುಹಿಸಲಾಗುತ್ತಿದೆ. ಕೋವಿಡ್ ವರದಿ ನೆಗಟಿವ್ ಬರುತ್ತಿದ್ದು, ಮಕ್ಕಳಲ್ಲಿ ಈಗ ವೈರಲ್ ನ್ಯುಮೋನಿಯಾ ಕಂಡು ಬರುತ್ತಿದೆ. ಬದಲಾದ ವಾತಾವರಣ ಮತ್ತು ಅನ್ಲಾಕ್ ಬಳಿಕ ಮಕ್ಕಳಿಗೆ ಹೆಚ್ಚಿನದಾಗಿ ಹೊರಗಿನ ತಿಂಡಿ ತಿನಿಸುಗಳನ್ನು ಕೊಡಿಸಿದ ಪರಿಣಾಮ ಈ ಸ್ಥಿತಿ ಉಂಟಾಗಿದೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಮಕ್ಕಳಲ್ಲಿ ಹೆಚ್ಚಾಗಿ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ ಎಂದರು.