ಕೊಪ್ಪಳ: ನಗರದ ಸಾಹಿತ್ಯ ಭವನದಲ್ಲಿ ಪೌರಕಾರ್ಮಿಕ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಕಾರ್ಮಿಕರು ಶ್ರಮಜೀವಿಗಳು, ಶ್ರಮವಹಿಸಿ ದುಡಿಯುವ ಕಾರ್ಮಿಕರು ದೇವರ ಸಮಾನ. ಪೌರ ಕಾರ್ಮಿಕರ ಕಲ್ಯಾಣಕ್ಕೆ ಈ ಹಿಂದಿನ ಸಮ್ಮಿಶ್ರ ಸರ್ಕಾರ ಹಾಗೂ ಸಿದ್ದರಾಮಯ್ಯ ಸಿಎಂ ಆಗಿದ್ದಾಗಿನ ಸರ್ಕಾರ ಹೆಚ್ಚಿನ ಒತ್ತು ನೀಡಿತ್ತು. ಈಗಿನ ಸರ್ಕಾರವೂ ಸಹ ಪೌರಕಾರ್ಮಿಕ ಹಿತದೃಷ್ಠಿಯಿಂದ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಇನ್ನು, ಈಗಾಗಲೇ ಸರ್ಕಾರ ಪೌರಕಾರ್ಮಿಕರಿಗೆ ವಿವಿಧ ಯೋಜನೆಗಳ ಮೂಲಕ ಅನೇಕ ಸೌಲಭ್ಯಗಳನ್ನು ಕಲ್ಪಿಸಿದೆ. ಸ್ವಚ್ಛತೆ ವಿಷಯದಲ್ಲಿ ಮೈಸೂರು, ಕೇಂದ್ರ ಸರ್ಕಾರದಿಂದ ಮೊದಲ ಸ್ಥಾನ ಪಡೆದಿದೆ. ಈ ನಿಟ್ಟಿನಲ್ಲಿಯೂ ಕೊಪ್ಪಳ ನಗರಸಭೆಯ ಪೌರಕಾರ್ಮಿಕರು ಶ್ರಮಿಸಬೇಕು ಎಂದು ಹಿಟ್ನಾಳ್ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಮಾತನಾಡಿ, ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳನ್ನು ನಿಯಮಾನುಸಾರ ಈಗಾಗಲೇ ಕಲ್ಪಿಸಿಕೊಡಲಾಗಿದೆ. ಇನ್ನು, ಕೆಲ ಕಾರ್ಮಿಕರಿಗೆ ಮನೆ ಅಥವಾ ನಿವೇಶನ ನೀಡಲು ಯೋಚಿಸಲಾಗಿದೆ ಎಂದು ಹೇಳಿದರು.